ಮತ್ತೊಂದು ಸಿನಿಮಾ ಘೋಷಿಸಿದ ರಿಷಭ್ ಶೆಟ್ಟಿ: ನೆಟ್ಟಿಗರಿಂದ ಆಕ್ಷೇಪ

Krishnaveni K

ಬುಧವಾರ, 30 ಜುಲೈ 2025 (13:06 IST)
ಬೆಂಗಳೂರು: ಕಾಂತಾರ ಮೂಲಕ ಬಹುಭಾಷೆಗಳಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿರುವ ನಟ ರಿಷಭ್ ಶೆಟ್ಟಿ ಇಂದು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಆದರೆ ಅವರ ಹೊಸ ಸಿನಿಮಾ ಪೋಸ್ಟರ್ ನೋಡಿ ಪ್ರೇಕ್ಷಕರು ಅಪಸ್ವರವೆತ್ತಿದ್ದಾರೆ.

ಕಾಂತಾರ ಬಿಟ್ಟರೆ ರಿಷಭ್ ಈಗ ಯಾವುದೇ ಕನ್ನಡ ಸಿನಿಮಾ ಮಾಡುತ್ತಿಲ್ಲ. ಕಾಂತಾರ ಚಾಪ್ಟರ್ 1 ಅಕ್ಟೋಬರ್ 2 ಕ್ಕೆ ಬಿಡುಗಡೆಯಾಗುತ್ತಿದೆ. ಇದಲ್ಲದೆ ತೆಲುಗಿನಲ್ಲಿ ಜೈ ಹನುಮಾನ್, ಹಿಂದಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಎನ್ನುವ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದೀಗ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ. ತೆಲುಗಿನ ಅಶ್ವಿನಿ ಗಂಗರಾಜು ನಿರ್ದೇಶನದಲ್ಲಿ ಹೊಸ ಸಿನಿಮಾ ಘೋಷಣೆ ಮಾಡಿದ್ದು ಪೋಸ್ಟರ್ ಕೂಡಾ ಹಂಚಿಕೊಂಡಿದ್ದಾರೆ. ಇದೂ ಕೂಡಾ ಐತಿಹಾಸಿಕ ಪಾತ್ರವೇ.

ಈ ಪೋಸ್ಟರ್ ನೋಡಿ ನೆಟ್ಟಿಗರು ಆಕ್ಷೇಪವೆತ್ತಿದ್ದಾರೆ. ಕಾಂತಾರ ಬಳಿಕ ರಿಷಭ್ ಒಪ್ಪಿಕೊಂಡಿರುವ ಎಲ್ಲಾ ಸಿನಿಮಾಗಳೂ ಐತಿಹಾಸಿಕ ಪಾತ್ರಗಳೇ. ಒಂದೇ ರೀತಿಯ ಸಿನಿಮಾಗಳನ್ನು ಯಾಕೆ ಮಾಡ್ತಿದ್ದೀರಿ ಎಂದು ಪ್ರೇಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದು ಒಂದು ಆಕ್ಷೇಪವಾದರೆ ಕನ್ನಡ ಬಿಟ್ಟು ಪರಭಾಷೆ ಸಿನಿಮಾಗಳನ್ನೇ ಮಾಡುತ್ತಿರುವುದಕ್ಕೆ ಕನ್ನಡ ಪ್ರೇಕ್ಷಕರು ಬೇಸರಿಸಿಕೊಂಡಿದ್ದಾರೆ. ಕಾಂತಾರ ಬಿಟ್ಟರೆ ರಿಷಭ್ ಕೈಯಲ್ಲಿ ಈಗ ಅಪ್ಪಟ ಕನ್ನಡ ಸಿನಿಮಾಗಳೇ ಇಲ್ಲ. ಎರಡು ತೆಲುಗು, ಒಂದು ಹಿಂದಿ ಸಿನಿಮಾ ಮಾಡುತ್ತಿದ್ದಾರೆ.  ಆವತ್ತು ಕನ್ನಡ ಬಿಟ್ಟು ಹೋಗಲ್ಲ ಎಂದಿದ್ದ ರಿಷಭ್ ಈಗ ಪರಭಾಷೆ ಚಿತ್ರಗಳನ್ನೇ ಒಪ್ಪಿಕೊಳ್ಳುತ್ತಿರುವುದಕ್ಕೆ ಕನ್ನಡಿಗರು ಬೇಸರ ವ್ಯಕ್ತಪಡಿಸಿದ್ದಾರೆ. ತೆಲುಗು ಸಿನಿಮಾಗಳೇ ಜಾಸ್ತಿ ಯಾಕೆ? ಕನ್ನಡ ಮಾಡಿ, ಕನ್ನಡದವರ ಜೊತೆ ಕೆಲಸ ಮಾಡಿ ಎಂದು ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ