ಬೆಂಗಳೂರು: ಅಚ್ಚ ಕನ್ನಡದ ಖ್ಯಾತ ನಿರೂಪಕಿ, ಚಿತ್ರರಂಗದ ನಟಿ ಅಪರ್ಣಾ ವಸ್ತಾರೆ ಗುರುವಾರ ರಾತ್ರಿ ನಿಧನರಾದರು.
ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, 3 ದಿನಗಳಿಂದ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ಬನಶಂಕರಿಯ ಸ್ವಗೃಹಕ್ಕೆ ಪಾರ್ಥಿವ ಶರೀರ ತರಲಾಗುತ್ತದೆ.
ನಮ್ಮ ಮೆಟ್ರೋ ಸೇರಿದಂತೆ ಅನೇಕ ಪ್ರಕಟಣೆಗಳಿಗೆ ಧ್ವನಿ ನೀಡಿದ್ದ ಅಪರ್ಣಾ, ಮೂಡಲ ಮನೆ, ಮುಕ್ತ ಮುಕ್ತ ಮೊದಲಾದ ಧಾರಾವಾಹಿಗಳಲ್ಲೂ ನಟಿಸಿದ್ದರು. ದೀಪಾವಳಿ ಕಾರ್ಯಕ್ರಮದಲ್ಲಿ ಸತತ 8 ಗಂಟೆಗಳ ಕಾಲ ನಿರೂಪಣೆ ಮಾಡಿದ್ದ ಅಪರ್ಣಾ, 2013 ರಲ್ಲಿ ಬಿಗ್ ಬಾಸ್ ಶೋ ನಲ್ಲಿಯೂ ಭಾಗವಹಿಸಿದ್ದರು. ಮಜಾ ಟಾಕೀಸ್ ಶೋನಲ್ಲೂ ಕಾಣಿಸಿಕೊಂಡಿದ್ದರು.
90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳ ನಿರೂಪಣೆ ಮಾಡಿದ ನಂತರ ಭಾರತ ಸರ್ಕಾರದ ವಿವಿಧ ಭಾರತಿಯಲ್ಲಿ ರೇಡಿಯೋ ಜಾಕಿಯಾಗಿ ಕೂಡ ಅಪರ್ಣ ಕಾರ್ಯ ನಿರ್ವಹಿಸಿದ್ದರು. ನಿರೂಪಣೆಯಷ್ಟೇ ಅಲ್ಲದೇ ಮಸಣದ ಹೂವು, ಇನ್ಸ್ ಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಚಿತ್ರಗಳಲ್ಲೂ ಅಪರ್ಣಾ ನಟಿಸಿದ್ದರು.
ಅಪರ್ಣಾ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.
ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ. ಮೃತ ಅಪರ್ಣಾಳ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.