ಬೆಂಗಳೂರು: ಮೊನ್ನೆಯಷ್ಟೇ ನಟ ಅನಿರುದ್ಧ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಬೆಂಗಳೂರಿನ ಕೆಲವು ಬಡಾವಣೆಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಕಿದ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಲ್ಲದೆ, ಕಸ ನಿರ್ವಹಣೆ ಮಾಡುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರು.
ಆ ಮನವಿಗೆ ಈಗ ಬಿಬಿಎಂಪಿ ಅಧಿಕಾರಿಗಳು ಇದೀಗ ಸ್ಪಂದಿಸಿದ್ದಾರೆ. ತಮ್ಮ ಒಂದೇ ಒಂದು ಮನವಿಗೆ ಸ್ಪಂದಿಸಿದ ಅಧಿಕಾರಿಗಳನ್ನು ಅನಿರುದ್ಧ್ ಈಗ ಸನ್ಮಾನಿಸಲು ಹೊರಟಿದ್ದಾರೆ. ತಕ್ಷಣವೇ ಸ್ಪಂದಿಸಿ ಕುಮಾರಸ್ವಾಮಿ ಲೇಔಟ್ ನಲ್ಲಿ ರಸ್ತೆ ಬದಿಯಲ್ಲಿ ಬಿದ್ದಿದ್ದ ಭಾರೀ ಪ್ರಮಾಣ ಕಸ ನಿರ್ವಹಣೆ ಮಾಡಿಸಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತು ಅವರ ತಂಡಕ್ಕೆ ಧನ್ಯವಾದ ಸಲ್ಲಿಸಲು ನಾಳೆ ಬೆಳಿಗ್ಗೆ 11 ಗಂಟೆಗೆ ಅದೇ ಸ್ಥಳದಲ್ಲಿ ಅನಿರುದ್ಧ್ ತಮ್ಮ ನೇತೃತ್ವದಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು ನನ್ನ ಒಂದು ಮನವಿಯನ್ನು ನೋಡಿ ಸ್ವತಃ ಬಿಬಿಎಂಪಿ ಆಯುಕ್ತರು ಕೆಲವು ಅಧಿಕಾರಿಗಳನ್ನು ನಮ್ಮ ಮನೆಗೆ ಕಳುಹಿಸಿ ಆ ಛಾಯಾಚಿತ್ರಗಳು ಯಾವ ಬಡಾವಣೆಯದ್ದು ಎಂಬಿತ್ಯಾದಿ ಮಾಹಿತಿ ಸಂಗ್ರಹಿಸಿ ತಕ್ಷಣ ಆ ಸ್ಥಳಗಳಿಗೆ ಅಧಿಕಾರಿಗಳನ್ನು ಕಳುಹಿಸಿ ಕಸ ವಿಲೇವಾರಿಗೂ ಕ್ರಮ ಕೈಗೊಂಡಿದ್ದಾರೆ. ನನ್ನ ಮನವಿಗೆ ಸ್ಪಂದಿಸಿ ಕ್ರಮಕೈಗೊಂಡಿರುವ ಎಲ್ಲಾ ಬಿಬಿಎಂಪಿ ಅಧಿಕಾರಿಗಳಿಗೆ ಮತ್ತು ಪೌರ ಕಾರ್ಮಿಕರಿಗೆ ಧನ್ಯವಾದ. ಈ ಒಂದು ಒಳ್ಳೆಯ ಕೆಲಸ ಮಾಡಿದ ಅಧಿಕಾರಿಗಳಿಗೆ ಧನ್ಯವಾದ ಹೇಳಲು ಕುಮಾರಸ್ವಾಮಿ ಲೇ ಔಟ್ ಮುಖ್ಯರಸ್ತೆಯಲ್ಲಿ ಚಿಕ್ಕದಾದ ಕಾರ್ಯಕ್ರಮವಿಟ್ಟುಕೊಂಡಿದ್ದೇನೆ. ಇದಕ್ಕೆ ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದು ಅವರು ಹೇಳಿದ್ದಾರೆ.