ಬೆಂಗಳೂರು: ಜಿಯೋ ಹಾಟ್‌ಸ್ಟಾರ್ ಇಂದು ಏಕಾಏಕಿ ಸರ್ವರ್ ಡೌನ್ ಆಗಿದೆ. ಜೊತೆಗೆ ಸರ್ಚ್ ಬಟನ್ ಕೂಡ ನಾಪತ್ತೆಯಾಗಿದ್ದು, ಭಾರತದಾದ್ಯಂತ ಚಂದಾದಾರರು ಪರದಾಡುವಂತಾಗಿದೆ.
ಸದ್ಯ ಆ್ಯಪ್‌ನಲ್ಲಿ ಸರ್ಚ್, ಅಕೌಂಟ್ ಎಕ್ಸೆಸ್ ಮತ್ತು ವೀವ್ಯೂಸ್ ಹಿಸ್ಟರಿ ಪ್ರಮುಖ ವೈಶಿಷ್ಟ್ಯಗಳು ಕಾಣೆಯಾಗಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅನಿರೀಕ್ಷಿತ ತಾಂತ್ರಿಕ ಸಮಸ್ಯೆಯನ್ನು ಜಿಯೋ ಹಾಟ್‌ಸ್ಟಾರ್ ಒಪ್ಪಿಕೊಂಡಿದೆ ಮತ್ತು ಅದನ್ನು ಪರಿಹರಿಸಲು ಕೆಲಸ ಮಾಡುತ್ತಿದೆ.
ಜಿಯೋ ಹಾಟ್‌ಸ್ಟಾರ್ ಬಹು ಭಾಷೆಗಳಲ್ಲಿ ಬಿಗ್ ಬಾಸ್ ಲೈವ್ ಸ್ಟ್ರೀಮಿಂಗ್‌ನಂತಹ ಗ್ರಾಹಕರ ನೆಚ್ಚಿನ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಅದನ್ನು ವೀಕ್ಷಿಸಲು ಪ್ರಯತ್ನಿಸುವ ವೀಕ್ಷಕರಿಗೆ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಬಳಕೆದಾರರಿಗೆ ಮುಖಪುಟ ಮತ್ತು ಕ್ರೀಡಾ ವಿಭಾಗಗಳನ್ನು ಮಾತ್ರ ವೀಕ್ಷಿಸಲು ಸಾಧ್ಯವಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಯೋ ಹಾಟ್‌ಸ್ಟಾರ್ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಕೆಲವು ಅನಿರೀಕ್ಷಿತ ತಾಂತ್ರಿಕ ಸಮಸ್ಯೆಯಿಂದಾಗಿ, ನಮ್ಮ ಕೆಲವು ಬಳಕೆದಾರರು ವಿಷಯವನ್ನು ಸ್ಟ್ರೀಮಿಂಗ್ ಮಾಡುವಾಗ ಅಥವಾ ಪ್ಲಾಟ್‌ಫಾರ್ಮ್ ಅನ್ನು ಪ್ರವೇಶಿಸುವಾಗ ಸಮಸ್ಯೆಗಳನ್ನು ಹೊಂದಿರಬಹುದು. ಸಮಸ್ಯೆಯನ್ನು ಪರಿಹರಿಸಲು ನಾವು ಕೆಲಸ ಮಾಡುತ್ತಿದ್ದೇವೆ. ಗ್ರಾಹಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ ಎಂದು ಹೇಳಿದೆ.