ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಸಾವಿನ ದುಃಖ ನಟಿ ರಮ್ಯಾಗೆ ಕಡಿಮೆಯಾಗುತ್ತಿಲ್ಲ. ಇಂದೂ ಕೂಡಾ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಎಸ್ಎಂಕೆ ಬಗ್ಗೆ ಭಾವುಕ ಸಂದೇಶ ಬರೆದುಕೊಂಡಿದ್ದಾರೆ.
ನಟಿ ರಮ್ಯಾ ಕುಟುಂಬಕ್ಕೆ ಎಸ್ಎಂ ಕೃಷ್ಣ ಆತ್ಮೀಯರು. ಈ ಕಾರಣಕ್ಕೆ ನಿನ್ನೆ ಎಸ್ಎಂ ಕೃಷ್ಣ ನಿಧನದ ಸುದ್ದಿ ತಿಳಿದ ತಕ್ಷಣ ಓಡೋಡಿ ಬಂದಿದ್ದ ನಟಿ ರಮ್ಯಾ ಭಾವುಕರಾಗಿ ನಿಂತಿದ್ದರು. ಈ ವೇಳೆ ಮಾಧ್ಯಮಗಳು ಮಾತನಾಡಲು ಯತ್ನಿಸಿದರೂ ಈಗ ಏನೂ ಹೇಳುವ ಪರಿಸ್ಥಿತಿಯಲ್ಲಿಲ್ಲ ಎಂದಿದ್ದರು.
ಇದಾದ ಬಳಿಕ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಎಸ್ಎಂಕೆ ಫೋಟೋವೊಂದನ್ನು ಹಂಚಿಕೊಂಡಿದ್ದರು. ಇಂದು ಮತ್ತೊಮ್ಮೆ ಅಗಲಿದ ನಾಯಕನನ್ನು ಸ್ಮರಿಸಿಕೊಂಡ ರಮ್ಯಾ ಭಾವುಕ ಸಂದೇಶವೊಂದನ್ನು ಬರೆದಿದ್ದಾರೆ. ನಿಮ್ಮಂತಹ ನಾಯಕ ಮತ್ತೊಬ್ಬರು ಇರಲು ಸಾಧ್ಯವಿಲ್ಲ ಎಂದಿದ್ದಾರೆ.
ನೀವು ಕೇವಲ ರಾಜಕಾರಣಿಯಾಗಿರಲಿಲ್ಲ. ನಾಯಕರಾಗಿದ್ದಿರಿ. ಎಂದಿಗೂ ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದವರಲ್ಲ. ಕೆಟ್ಟ ಪದ ಪ್ರಯೋಗ ಮಾಡಿದವರಲ್ಲ. ನಿಮ್ಮ ಸಜ್ಜನರನ್ನು ಮರೆಯಲು ಸಾಧ್ಯವಿಲ್ಲ. ನಿಮ್ಮಗೆಳೆಯ ಇರುವ ಜಾಗಕ್ಕೇ ಹೋಗಿ ಸೇರಿಕೊಂಡಿದ್ದೀರಿ ಎಂದು ರಮ್ಯಾ ಸಂದೇಶ ಬರೆದಿದ್ದಾರೆ. ರಮ್ಯಾ ತಂದೆ ನಾರಾಯಣ್ ಮತ್ತು ಎಸ್ಎಂಕೆ ಆಪ್ತ ಗೆಳೆಯರಾಗಿದ್ದರು. ಹೀಗಾಗಿ ಅವರು ಈ ರೀತಿ ಬರೆದುಕೊಂಡಿದ್ದಾರೆ.