ಹಾಸನ: ಅರಣ್ಯ ಪ್ರದೇಶದಲ್ಲಿ ಕಾಂತಾರ ಪ್ರೀಕ್ವೆಲ್ ಚಿತ್ರ ತಂಡವು ಮರಗಳನ್ನು ಕಡಿದಿದೆ ಮತ್ತು ಚಿತ್ರೀಕರಣದ ವೇಳೆ ಸ್ಫೋಟ ಮಾಡಿ ವನ್ಯಪ್ರಾಣಿಗಳಿಗೆ ತೊಂದರೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಿಷಭ್ ಶೆಟ್ಟಿ ಬಳಗಕ್ಕೆ ಕ್ಲೀನ್ ಚಿಟ್ ಸಿಕ್ಕಿದೆ.
ಚಿತ್ರತಂಡದ ವಿರುದ್ಧ ಕೇಳಿಬಂದ ಆರೋಪಕ್ಕೆ ಸಂಬಂಧಿಸಿದಂತೆ ಸಕಲೇಶಪುರ ಎಸಿಎಫ್ ಹಾಗೂ ಯಸಳೂರು ಆರ್‍ಎಫ್‍ಓ ಚಿತ್ರೀಕರಣದ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದೆ. ಚಿತ್ರೀಕರಣದ ವೇಳೆ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ. ಯಾವುದೇ ಸ್ಫೋಟ ಮಾಡಿಲ್ಲ, ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಚಿತ್ರೀಕರಣದ ವೇಳೆ ಸ್ಫೋಟ ಮಾಡಲಾಗಿದೆ. ಮರ ಕಡಿಯಲಾಗಿದೆ ಎಂದು ಕೆಲ ಸ್ಥಳೀಯರು ಆರೋಪಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ, ಚಿತ್ರತಂಡವು ನಿಯಮ ಉಲ್ಲಂಘಿಸಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ವರದಿ ಸಲ್ಲಿಸಿದ್ದರು.
ಮರದ ಬಣ್ಣ ಬಳಿದ ಕೃತಕ ಮರಗಳನ್ನು ಚಿತ್ರೀಕರಣಕ್ಕೆ ಬಳಕೆ ಮಾಡಲಾಗಿದೆ. ಚಿತ್ರೀಕರಣದಿಂದ ಅರಣ್ಯ ಹಾಗೂ ಮರಗಳಿಗೆ ಯಾವುದೇ ಹಾನಿ ಆಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಾಂತಾರ ಪ್ರೀಕ್ವೆಲ್ ಚಿತ್ರವನ್ನು ರಿಷಭ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದು, ಮುಖ್ಯಭೂಮಿಕೆಯಲ್ಲಿ ಅವರೇ ನಟಿಸುತ್ತಿದ್ದಾರೆ.