ಬೆಂಗಳೂರು: ಒಂದೆಡೆ ರಮ್ಯಾ, ಪ್ರಥಮ್ ಮತ್ತು ಡಿಬಾಸ್ ಫ್ಯಾನ್ಸ್ ನಡುವೆ ವಾರ್ ಆಗುತ್ತಿದ್ದರೆ ಇತ್ತ ನಟ ದರ್ಶನ್ ಎಲ್ಲಿದ್ದಾರೆ ಗೊತ್ತಾ? ಇದ್ಯಾವುದರ ಬಗ್ಗೆಯೂ ಅವರು ತಲೆಯೇ ಕೆಡಿಸಿಕೊಂಡಂತಿಲ್ಲ.
ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್ ಮಾಡಿದ್ದಕ್ಕೆ ದರ್ಶನ್ ರ 43 ಅಭಿಮಾನಿಗಳ ಖಾತೆ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ನನ್ನ ಮೇಲೆ ಅಭಿಮಾನಿಗಳು ದಾಳಿ ಮಾಡಿದ್ದಕ್ಕೆ ದರ್ಶನ್ ಬಂದು ಸ್ಪಷ್ಟನೆ ಕೊಡಬೇಕು ಎಂದು ಬಿಗ್ ಬಾಸ್ ಪ್ರಥಮ್ ಧರಣಿ ನಡೆಸುತ್ತಿದ್ದಾರೆ.
ಇವರಿಬ್ಬರೂ ಹೀಗೆ ಮುಗಿಬಿದ್ದಿದ್ದರೆ ಇತ್ತ ದರ್ಶನ್ ಮಾತ್ರ ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೇ ಪತ್ನಿ ಜೊತೆ ಟೆಂಪಲ್ ರನ್ ನಡೆಸಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಜೊತೆ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್ ನಲ್ಲಿ ಜಾಮೀನು ತೀರ್ಪು ಇರುವ ಬೆನ್ನಲ್ಲೇ ದರ್ಶನ್ ದೇವರ ಮೊರೆ ಹೋಗಿದ್ದಾರೆ. ದರ್ಶನ್ ಜೈಲಿನಲ್ಲಿದ್ದಾಗಲೂ ವಿಜಯಲಕ್ಷ್ಮಿ ಅವರು ಈ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಪ್ರಸಾದ ತಂದಿದ್ದರು. ಆಗ ಕಟ್ಟಿದ್ದ ಹರಕೆಯನ್ನು ಈಗ ವಿಜಯಲಕ್ಷ್ಮಿ ಪತಿ ಜೊತೆ ಹೋಗಿ ತೀರಿಸಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗೆ ಬಂದ ಬಳಿಕ ದರ್ಶನ್ ನಿರಂತರವಾಗಿ ಟೆಂಪಲ್ ರನ್ ನಡೆಸುತ್ತಿದ್ದಾರೆ. ಇದೀಗ ರಮ್ಯಾ ವಿರುದ್ಧ ಮತ್ತು ಪ್ರಥಮ್ ವಿರುದ್ಧ ಡಿಬಾಸ್ ಅಭಿಮಾನಿಗಳು ವಿವಾದ ಮಾಡಿಕೊಂಡಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ದರ್ಶನ್ ಮೌನ ಮುರಿಯುತ್ತಾರಾ ಕಾದು ನೋಡಬೇಕಿದೆ.