ಯೂ-ಟ್ಯೂಬ್‌ನಲ್ಲಿ ಸದ್ದುಮಾಡುತ್ತಿರುವ ಅಲ್ಲು ಅರ್ಜುನ್..!!

ನಾಗಶ್ರೀ ಭಟ್

ಸೋಮವಾರ, 8 ಜನವರಿ 2018 (18:58 IST)
ಅಲ್ಲು ಅರ್ಜುನ್ ಅಭಿನಯಿಸುತ್ತಿರುವ 'ನಾ ಪೇರು ಸೂರ್ಯ' ಚಿತ್ರದ ಟೀಸರ್ ಜನವರಿ 5, 2018 ರಂದು ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಮಿಲಿಟರಿ ಮ್ಯಾನ್ ಆಗಿ ಅಭಿನಯಿಸಿದ್ದಾರೆ. ಪಕ್ಕಾ ಸ್ಟೈಲಿಶ್ ಮ್ಯಾನ್ ಎಂದೇ ಹೆಸರುವಾಸಿಯಾಗಿರುವ ಅಲ್ಲು ಅರ್ಜುನ್‌ರನ್ನು ಮಿಲಿಟರಿ ಮ್ಯಾನ್ ಗೆಟಪ್‌ನಲ್ಲಿ ನೋಡಿದ ಅಭಿಮಾನಿಗಳಿಗೆ ಈ ಟೀಸರ್ ತುಂಬಾನೇ ಇಷ್ಟವಾಗಿದೆ.

ಈ ಟೀಸರ್ ಬಿಡುಗಡೆ ಹೊಂದಿದ ಎರಡು ದಿನಗಳಲ್ಲೇ ಬರೋಬ್ಬರಿ 10 ಮಿಲಿಯನ್‌ಗೂ ಅಧಿಕ ಜನರು ವೀಕ್ಷಿಸಿದ್ದು, ಟೀಸರ್‌ನಿಂದಲೇ ಇಷ್ಟೊಂದು ಸದ್ದು ಮಾಡಿರುವ ಈ ಸಿನಿಮಾವನ್ನು ವೀಕ್ಷಿಸಲು ಅಲ್ಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
 
'ನಾ ಪೇರು ಸೂರ್ಯ ನಾ ಇಲ್ಲು ಇಂಡಿಯಾ ಎಂಬ ಟ್ಯಾಗ್ ಲೈನ್' ಹೊಂದಿರುವ ಈ ಚಿತ್ರದಲ್ಲಿ ಅಲ್ಲು ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ. ಅತೀಯಾದ ಕೋಪದಿಂದ ಕಥಾನಾಯಕ ಯಾವ ತರಹದ ತೊಂದರೆಗಳನ್ನು ಅನುಭವಿಸುತ್ತಾನೆ ಎಂಬುದೇ ಈ ಚಿತ್ರದ ತಿರುಳು. ಈ ಚಿತ್ರದಲ್ಲಿ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ಅನು ಎಮ್ಯಾನ್ಯುವೆಲ್ ಅಭಿನಯಿಸಿದ್ದು ಇವರೊಂದಿಗೆ ಅರ್ಜುನ್ ಸರ್ಜಾ, ವೆನ್ನೆಲಾ ಕಿಶೋರ್, ಆರ್. ಶರತ್‌ಕುಮಾರ್, ರಾವ್ ರಮೇಶ್ ಹಾಗೂ ಇನ್ನಿತರರು ಈ ಚಿತ್ರದಲ್ಲಿದ್ದಾರೆ. 
 
ಚಿತ್ರದ ಟೀಸರ್‌ಗೆ ದೊರೆತ ಪ್ರತಿಕ್ರಿಯೆಗೆ ಸಂತಸಗೊಂಡಿರುವ ಅಲ್ಲು "ಎಲ್ಲರಿಗೂ ಧನ್ಯವಾದಗಳು. ಅದ್ಭುತ ಪ್ರತಿಕ್ರಿಯೆಗಾಗಿ ಕೃತಜ್ಞತನಾಗಿರುತ್ತೇನೆ". ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಅಂದ ಹಾಗೇ ರಾಮಲಕ್ಷ್ಮೀ ಸಿನಿ ಕ್ರಿಯೇಶನ್ಸ್ ಸಂಸ್ಥೆಯಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು ಈ ಚಿತ್ರಕ್ಕೆ ವಕ್ಕಾಂತಂ ವಂಶಿ ಆ್ಯಕ್ಷನ್ ಕಟ್ ಹೇಳಿದ್ದಾರೆ, ಅಲ್ಲದೇ ವಿಶಾಲ್ ಶೇಕರ್ ಸಂಗೀತ ಈ ಚಿತ್ರಕ್ಕಿದೆ. ಈ ಚಿತ್ರವು ಏಪ್ರಿಲ್‌ ತಿಂಗಳಿನಲ್ಲಿ ತೆರೆ ಕಾಣುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ