ಪ್ರಶಾಂತ್ ಸಂಬರಗಿ ಬಿಗ್ ಬಾಸ್ ಮನೆಯಲ್ಲಿ ಕುಚಿಕು ಗೆಳೆಯ ಚಕ್ರವರ್ತಿ ಸೇರಿದಂತೆ ತುಂಬಾ ಜನರ ಜೊತೆ ಜಗಳ ಆಡೋದು ಸಾಮಾನ್ಯವಾಗಿ ಹೋಗಿದೆ. ಈ ಹಿಂದೆ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಅವರೊಂದಿಗೆ ಜಗಳ ಆಡುವುದರೊಂದಿಗೆ ಪ್ರಶಾಂತ್ ಸಂಬರಗಿ ಚುಚ್ಚು ಮಾತುಗಳನ್ನಾಡುವ ಮೂಲಕ ಮನಸ್ಸಿಗೆ ನೋವು ಮಾಡಿದ್ದರು. ಪ್ರಶಾಂತ್ ಅವರ ಚುಚ್ಚು ಮಾತುಗಳಿಂದ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಕಣ್ಣೀರಿಟ್ಟಿದ್ದರು. ಇದೇ ವಿಷಯ ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಚರ್ಚೆಗೆ ಬಂದಿತ್ತು. ಆಗ ಸುದೀಪ್ ಅವರು ಪ್ರಶಾಂತ್ ಸಂಬರಗಿ ಅವರಿಗೆ ಈ ವಿಷಯವಾಗಿಯೇ ಮಾತಿನ ಚಾಟಿ ಬೀಸಿದ್ದರು. ಆಗಿನಿಂದ ಪ್ರಶಾಂತ್ ಮನೆಯಲ್ಲಿ ಚುಚ್ಚು ಮಾತುಗಳನ್ನು ಆಡುವುದನ್ನು ಕೊಂಚ ಕಡಿಮೆ ಮಾಡಿದ್ದರು. ಆದರೆ ಚುಚ್ಚು ಮಾತು ನಿಲ್ಲಿಸಿದರೂ ಜಗಳ ಮಾತ್ರ ಕಡಿಮೆಯಾಗಿಲ್ಲ.
ಹೌದು, ಅರವಿಂದ್ ಹಾಗೂ ದಿವ್ಯಾ ಉರುಡುಗ ಜತೆ ಮೊದಲಿನಿಂದಲೂ ಚೆನ್ನಾಗಿಯೇ ಇರುವ ಪ್ರಶಾಂತ್ ಸಂಬರಗಿ ಅವರಿಗೆ ಅರವಿಂದ್ ಅವರು ಟಾಸ್ಕ್ ವಿಷಯದಲ್ಲಿ ನಡೆದುಕೊಂಡ ರೀತಿ ಸರಿಯಾಗಿಲ್ಲ ಅನ್ನೋ ಭಾವನೆ ಮೂಡಿದೆ. ಇನ್ನು ಕ್ಯಾಪ್ಟನ್ ದಿವ್ಯಾ ಉರುಡುಗ ಸಹ ಆಟದಲ್ಲಿ ಮೋಸ ಮಾಡಿದ್ದಾರಂತೆ. ಈ ವಿಷಯವಾಗಿಯೇ ನಿನ್ನೆ ಪ್ರಶಾಂತ್ ಅವರು ದಿವ್ಯಾ ಉರುಡುಗ ಅವರ ಬಳಿ ಚರ್ಚಿಸಿ, ಕೊಂಚ ಮಾತಿನ ಚಕಮಕಿ ನಡೆಯಿತು.
ಇದರ ಮುಂದುವರೆದ ಭಾಗವಾಗಿಯೇ ಇಂದು ಮತ್ತೆ ಮನೆಯಲ್ಲಿ ಪ್ರಶಾಂತ್ ಸಂಬರಗಿ ಹಾಗೂ ಅರವಿಂದ್ ಕೆ ಪಿ ಅವರ ನಡುವೆ ಜೋರಾಗಿ ಮಾತುಕತೆ ನಡೆದಿದೆ. ಸದ್ಯಕ್ಕೆ ರಿಲೀಸ್ ಆಗಿರುವ ಪ್ರೋಮೋದಲ್ಲಿ ದಿವ್ಯಾ ಉರುಡುಗ ಹಾಗೂ ಪ್ರಶಾಂತ್ ಸಂಬರಗಿ ಅಡುಗೆ ಮನೆಯ ಎದುರು ಇರುವ ಮೆಟ್ಟಿಲುಗಳ ಮೇಲೆ ಕುಳಿತಿರುತ್ತಾರೆ. ಆಗ ಬಿಗ್ ಬಾಸ್ ವಾಯ್ಸ್ ಕೇಳಿಸುತ್ತದೆ. ದಿವ್ಯಾ ಉರುಡುಗ ಅವರ ಕ್ಯಾಪ್ಟನ್ಸಿ ಇಂದಿಗೆ ಮುಕ್ತಾಯವಾಗಿದೆ ಎನ್ನುತ್ತಾರೆ.
ಈ ಪ್ರಕಟಣೆಯ ನಂತರ ದಿವ್ಯಾ ಉರುಡುಗ ಟಾಸ್ಕ್ ವಿಷಯದಲ್ಲಿ ಮಾಡಿದ್ದು ತಪ್ಪು ಹಾಗೂ ಮೋಸ ಎಂದು ಪ್ರಶಾಂತ್ ಮಾತು ಆರಂಭಿಸುತ್ತಾರೆ. ಅಲ್ಲಿಂದ ಜಗಳ ಮಾತುಕತೆ ಆರಂಭವಾಗುತ್ತದೆ.