ಸೂರ್ಯವಂಶ ಧಾರವಾಹಿಗೂ ಮುನ್ನವೂ ಪಿತೂರಿ ನಡೆದಿದ್ದನ್ನು ಬಹಿರಂಗಪಡಿಸಿದ ಅನಿರುದ್ಧ್ ಜತ್ಕಾರ್

Krishnaveni K

ಗುರುವಾರ, 7 ಮಾರ್ಚ್ 2024 (12:05 IST)
ಬೆಂಗಳೂರು: ನಟ ಅನಿರುದ್ಧ್ ನಾಯಕರಾಗಿ, ಸುಂದರ್ ರಾಜ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸೂರ್ಯವಂಶ ಧಾರವಾಹಿ ಇದೇ ತಿಂಗಳು 11 ರಿಂದ ಉದಯ ವಾಹಿನಿಯಲ್ಲಿ ಪ್ರಸಾರ ಆರಂಭಿಸುತ್ತಿದೆ. ಈ ಧಾರವಾಹಿ ತಂಡ ಇದೀಗ ಪತ್ರಿಕಾಗೋಷ್ಠಿ ನಡೆಸಿ ಧಾರವಾಹಿ ಬಗ್ಗೆ ಮಾಹಿತಿ ನೀಡಿದೆ.

ಮಾರ್ಚ್ 11 ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8 ಗಂಟೆಗೆ ಉದಯ ವಾಹಿನಿಯಲ್ಲಿ ಧಾರವಾಹಿ ಪ್ರಸಾರವಾಗಲಿದೆ. ಈ ಮೊದಲು ಸಾಹಸಸಿಂಹ ಡಾ. ವಿಷ್ಣುವರ್ಧನ್ ಗೆ ಹೆಸರು ತಂದುಕೊಟ್ಟಿದ್ದ ಸೂರ್ಯವಂಶ ಸಿನಿಮಾದ ಟೈಟಲ್ ಇಟ್ಟುಕೊಂಡು ಈಗ ಅವರ ಅಳಿಯ, ನಟ ಅನಿರುದ್ಧ್ ನಾಯಕತ್ವದಲ್ಲಿ ಧಾರವಾಹಿ ಬರಲಿದೆ. ಹಿರಿಯ ನಟ ಸುಂದರ್ ರಾಜ್ ಸತ್ಯಮೂರ್ತಿ ಪಾತ್ರ ಮಾಡುತ್ತಿದ್ದಾರೆ.  ಹರಿಸಂತು ಸೀರಿಯಲ್ ನ ಪ್ರಧಾನ ನಿರ್ದೇಶಕರಾಗಿದ್ದು, ಪದ್ಮನಾಭ್ ನಿರ್ಮಾಣ ಮಾಡುತ್ತಿದ್ದಾರೆ.

ಈ ಧಾರವಾಹಿಗಿಂತ ಮೊದಲು ನಟ ಅನಿರುದ್ಧ್ ಜತ್ಕಾರ್ ಜೊತೆ ಜೊತೆಯಲಿ ಧಾರವಾಹಿಯಲ್ಲಿ ನಾಯಕನ ಪಾತ್ರ ಮಾಡಿದ್ದರು. ಆ ಧಾರವಾಹಿ ಅವರಿಗೆ ಸಾಕಷ್ಟು ಖ‍್ಯಾತಿ-ಅಪಖ್ಯಾತಿ ಎರಡನ್ನೂ ತಂದುಕೊಟ್ಟಿತ್ತು. ಆ ಧಾರವಾಹಿ ವಿವಾದಿಂದಾಗಿ ಅವರನ್ನು ಎರಡು ವರ್ಷದವರೆಗೆ ಕಿರುತೆರೆಯಲ್ಲಿ ಬ್ಯಾನ್‍ ಮಾಡಬೇಕು ಎಂದು ಒತ್ತಾಯ ಕೇಳಿಬಂದಿತ್ತು. ಕಳೆದ ಬಾರಿ ಎಸ್. ನಾರಾಯಣ್ ನೇತೃತ್ವದಲ್ಲಿ ಧಾರವಾಹಿ ಸೆಟ್ಟೇರಿದಾಗ ನಿರ್ಮಾಪಕ ಸಂಘದ ಕೆಲವರು ಅನಿರುದ್ಧ್ ಅವರನ್ನು ಹಾಕಿಕೊಳ್ಳಬಾರದು ಎಂದು ಎಸ್. ನಾರಾಯಣ್ ಹೇಳಿದ್ದರು. ಆದರೆ ಕೊನೆಗೆ ಪ್ರಕರಣ ಮಾತುಕತೆಯಲ್ಲಿ ಬಗೆಹರಿಯಿತು.

ಆದರೆ ಇದೀಗ ಹೊಸ ತಂಡದೊಂದಿಗೆ ಸೂರ್ಯವಂಶ ಧಾರವಾಹಿ ಪ್ರಸಾರವಾಗುತ್ತಿದೆ. ಆದರೆ ಈಗಲೂ ತಮ್ಮ ವಿರುದ್ಧ ಪಿತೂರಿ ನಡೆದಿದೆ ಎಂದು ಅನಿರುದ್ಧ್ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ. ‘ನಮ್ಮ ನಿರ್ಮಾಪಕರಿಗೆ ಕರೆ ಬಂದರೂ ಬಹುಶಃ ಅವರು ಹೇಳಿಲ್ಲವೇನೋ. ಆದರೆ ಉದಯ ವಾಹಿನಿಗೆ ಹಲವು ಕರೆಗಳು ಬಂದಿವೆ. ಈ ಚಾನೆಲ್ ಉತ್ತುಂಗದಲ್ಲಿದ್ದಾಗ ಬೇರೆ ಚಾನೆಲ್ ಗಳು ಹುಟ್ಟಿಯೇ ಇರಲಿಲ್ಲ. ಅದು ಉದಯ ವಾಹಿನಿಯ ಶಕ್ತಿ. ಅದು ಅವರಿಗೂ ಗೊತ್ತಿದೆ. ಯಾರೇ ಕರೆ ಮಾಡಿದರೂ ಕಚೇರಿಗೆ ಬಂದು ಮಾತನಾಡಿ ಎಂದು ವಾಹಿನಿಯವರು ಹೇಳಿದ್ದಾರೆ. ಆದರೆ ಯಾರೂ ಮಾತುಕತೆಗೆ ಬರಲಿಲ್ಲ. ಈ ಹಿಂದೆ ಎಸ್. ನಾರಾಯಣ್ ಬಳಿಯೂ ಹೋಗಿ ಅನಿರುದ್ಧ್ ಅವರನ್ನು ಹಾಕಿಕೊಳ್ಳಬೇಡಿ ಎಂದು ಹೇಳಿದ್ದರು. ಆದರೆ ನಾರಾಯಣ್ ಯಾರ ಮಾತೂ ಕೇಳಲಿಲ್ಲ. ಅವರೂ ಮಾತುಕತೆಗೆ ಬರಲಿಲ್ಲ’ ಎಂದು ಅನಿರುದ್ಧ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ