ಬೆಂಗಳೂರು: ಪ್ರತಿಷ್ಠಿತ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇಂದಿನಿಂದ ಆರಂಭವಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಡಾಲಿ ಧನಂಜಯ್ ಚಲನಚಿತ್ರೋತ್ಸವದ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
15 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂದು ಸಂಜೆ 5 ಗಂಟೆಗೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆಯುವ ಕಾರ್ಯಕ್ರಮದಲ್ಲಿ ಚಾಲನೆ ಸಿಗಲಿದೆ. ನಟ ಶಿವರಾಜ್ ಕುಮಾರ್, ಡಾ. ಜಬ್ಬಾರ್ ಪಟೇಲ್, ಬಾಂಗ್ಲಾ ನಟಿ ಅಜಮೇರಿ ಬಂದೋನ್ ಸೇರಿದಂತೆ ಗೌರವಾನ್ವಿತ ಅತಿಥಿಗಳು ಉಪಸ್ಥಿತರಿರಲಿದ್ದಾರೆ.
ಉದ್ಘಾಟನೆಗೆ ಮೊದಲು ಮೂರು ಬಾರಿ ಗ್ರಾಮಿ ಪ್ರಶಸ್ತಿ ವಿಜೇತರಾದ ರಿಕಿ ಕೇಜ್ ಅವರಿಂದ ಮನರಂಜನಾ ಕಾರ್ಯಕ್ರಮಗಳು ನಡೆಯಲಿದೆ. ಉದ್ಘಾಟನಾ ಚಿತ್ರವಾಗಿ ಸ್ವಿಸ್ ಚಲನಚಿತ್ರ ಬೋಂಜೂರ್ ಸ್ವಿಟ್ಸರ್ಲೆಂಡ್ ಚಲನಚಿತ್ರ ಪ್ರಸಾರವಾಗಲಿದೆ. ಒಟ್ಟಾರೆಯಾಗಿ ಸುಮಾರು 50 ಕ್ಕೂ ದೇಶಗಳ 180 ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.
ಇನ್ನು, ಕನ್ನಡ ಚಿತ್ರಗಳನ್ನೂ ಚಿತ್ರೋತ್ಸವದಲ್ಲಿ ವೀಕ್ಷಿಸಬಹುದು. ಕನ್ನಡ ಚಿತ್ರರಂಗಕ್ಕೆ 90 ವರ್ಷ ಪೂರೈಸಿದ ಹಿನ್ನಲೆಯಲ್ಲಿ ವಿಶೇಷ ವಿಭಾಗದಲ್ಲಿ 30 ಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಸ್ಥಳೀಯ ಚಿತ್ರವಿಮರ್ಶಕರು, ಪತ್ರಕರ್ತರು, ಸಾಹಿತಿಗಳು, ಅಂತಾರಾಷ್ಟ್ರೀಯ ವಿಮರ್ಶಕರು ಸೇರಿದಂತೆ ತಜ್ಞರು ಸಿನಿಮಾಗಳ ತೀರ್ಪುಗಾರರಾಗಿದ್ದಾರೆ.