ಕೇರಳದಂತೆ ಸ್ಯಾಂಡಲ್ ವುಡ್ ನಲ್ಲೂ ಸಮಿತಿ ರಚಿಸಿ ಲೈಂಗಿಕ ಕಿರುಕುಳದ ಬಗ್ಗೆ ತನಿಖೆ ನಡೆಸಬೇಕು ಎಂದು ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿರ್ಮಾಪಕರು, ಕಲಾವಿದರು ಸಭೆ ಸೇರಿದ್ದರು. ಈ ವೇಳೆ ನಟಿ ಭಾವನಾ ಈ ರೀತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೀಟೂ ಆರೋಪಗಳ ಬಗ್ಗೆ ವಿಚಾರಣೆ ನಡೆಸಲು ಒಂದು ಸಮಿತಿ ರಚಿಸಬೇಕೇ ಬೇಡವೇ ಎಂಬ ಬಗ್ಗೆ ವಾಣಿಜ್ಯ ಮಂಡಳಿಯಲ್ಲಿ ಬಿಸಿ ಬಿಸಿ ಚರ್ಚೆಯಾಗಿದೆ. ಕೆಲವು ಕಲಾವಿದರೇ ಅಂತಹ ಕಮಿಟಿಯ ಅಗತ್ಯವಿಲ್ಲ ಎಂದು ಧ್ವನಿಯೆತ್ತಿದ್ದಾರೆ. ಆದರೆ ನಟಿ ಅನಿತಾ ಭಟ್ ಮುಂತಾದವರು ನಮಗೇ ಇಂತಹ ಅನುಭವಗಳಾಗಿವೆ. ಅಂತಹ ಪರಿಸ್ಥಿತಿ ಎದುರಿಸಿಲ್ಲ ಎಂಬ ಮಾತ್ರಕ್ಕೆ ಅಂತಹ ಘಟನೆಗಳೇ ಆಗಿಲ್ಲ ಎಂದು ಅರ್ಥವಲ್ಲ ಎಂದಿದ್ದಾರೆ.
ಆದರೆ ನಟಿ ಭಾವನಾ ರಾಮಣ್ಣ, ಸ್ಯಾಂಡಲ್ ವುಡ್ ಗೆ ಅಂತಹ ಕಮಿಟಿಯ ಅಗತ್ಯವಿಲ್ಲ. ಹೆಣ್ಣು ಅಂದಾಗ ಹಲವು ಸಮಸ್ಯೆಗಳು ಬರುವುದು ಸಹಜ. ಇಂಡಸ್ಟ್ರಿ ಎಂದ ಮೇಲೆ ಅದೆಲ್ಲಾ ಇದ್ದೇ ಇರುತ್ತದೆ. ಒಂದು ವೇಳೆ ಕನ್ನಡ ಚಿತ್ರರಂಗದಲ್ಲೂ ಅಂತಹ ಕೆಟ್ಟ ವಾತಾವರಣವಿದೆ ಎಂದರೆ ಅಲ್ಲಿ ಕೆಲಸ ಮಾಡಲು ಹೋಗಬೇಡಿ. ಹೆಣ್ಣು ಮಕ್ಕಳಿಗೆ ಏನಾದರೂ ಸಮಸ್ಯೆಯಾದರೆ ವಾಣಿಜ್ಯ ಮಂಡಳಿಯಿದೆ. ಅದು ಬಿಟ್ಟು ಅದಕ್ಕೇ ಪ್ರತ್ಯೇಕ ಸಮಿತಿ, ಸಂಘದ ಅಗತ್ಯವಿಲ್ಲ ಎಂದು ಭಾವನಾ ಕಿಡಿ ಕಾರಿದ್ದಾರೆ.