ಬೆಂಗಳೂರು: ಪರಿಸರ ನಿಯಮ ಉಲ್ಲಂಘನೆ ಆರೋಪದಡಿ ಬಂದ್ ಆಗಿದ್ದ ಜಾಲಿವುಡ್ ಸ್ಟುಡಿಯೋಸ್ ನ ಬಿಗ್ ಬಾಸ್ ಸೆಟ್ ನಿನ್ನೆ ರಾತ್ರೋ ರಾತ್ರಿ ಮತ್ತೆ ಓಪನ್ ಆಗಿದೆ. ಇದಕ್ಕೆ ಕಾರಣ ಕಿಚ್ಚ ಸುದೀಪ್ ಮಾಡಿದ ಒಂದು ಕರೆ.
ಬಿಗ್ ಬಾಸ್ ಶೋ ಕಿಚ್ಚ ಸುದೀಪ್ ಗೆ ತುಂಬಾ ಇಷ್ಟದ ಶೋ. ಕಳೆದ 12 ಸೀಸನ್ ಗಳನ್ನೂ ಅವರೇ ನಿರೂಪಣೆ ಮಾಡುತ್ತಿದ್ದಾರೆ. ಇಷ್ಟು ಸುದೀರ್ಘ ಅವಧಿಗೆ ಬಿಗ್ ಬಾಸ್ ನಿರೂಪಣೆ ಮಾಡಿದವರು ಬೇರೆ ಯಾರೂ ಇಲ್ಲ.
ಆದರೆ ಮೊನ್ನೆ ಬಿಗ್ ಬಾಸ್ ಮನೆಗೆ ಬೀಗ ಬೀಳುತ್ತಿದ್ದಂತೇ ಇದೆಲ್ಲಾ ಈ ಹಿಂದೆ ಡಿಕೆ ಶಿವಕುಮಾರ್ ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂದಿದ್ದರ ಪ್ರಭಾವ ಎನ್ನಲಾಗಿತ್ತು. ಸುದೀಪ್ ಮೇಲಿನ ಸಿಟ್ಟಿಗೇ ಡಿಕೆಶಿ ಬೀಗ ಹಾಕಿಸಿದ್ದಾರೆ ಎಂದು ಆರೋಪಗಳು ಬಂದಿತ್ತು.
ಇದರ ಬೆನ್ನಲ್ಲೇ ನಿನ್ನೆ ಸ್ವತಃ ಡಿಕೆ ಶಿವಕುಮಾರ್ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗಳಿಗೆ ಬಿಗ್ ಬಾಸ್ ನಡೆಯುತ್ತಿದ್ದ ಸೆಟ್ ನ ಬೀಗ ತೆಗೆಯುವಂತೆ ಸೂಚನೆ ನೀಡಿದ್ದಾರೆ. ಇದಕ್ಕೆಲ್ಲಾ ಕಾರಣ ಕಿಚ್ಚ ಸುದೀಪ್ ನೇರವಾಗಿ ಡಿಕೆಶಿಗೆ ಫೋನ್ ಕರೆ ಮಾಡಿದ್ದು ಎನ್ನಲಾಗಿದೆ. ಬಿಗ್ ಬಾಸ್ ಮುಂದುವರಿಸಲು ಅನುವು ಮಾಡಿಕೊಡುವಂತೆ ಸುದೀಪ್ ಫೋನ್ ಮೂಲಕ ಮನವಿ ಮಾಡಿದ್ದರು ಎನ್ನಲಾಗಿದೆ. ನನ್ನ ಕರೆಗೆ ಸ್ಪಂದಿಸಿದ್ದಕ್ಕೆ ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದಗಳು ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಮೊಹಮ್ಮದ್ ನಲಪಾಡ್ ಕೂಡಾ ಈ ನಿಟ್ಟಿನಲ್ಲಿ ನಮಗೆ ಸಹಾಯ ಮಾಡಿದ್ದಾರೆ ಎಂದು ಸುದೀಪ್ ಹೇಳಿದ್ದಾರೆ.