ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರಿಗೆ ಸ್ನೇಹಿತ, ನಟ ಚಿಕ್ಕಣ್ಣ ಪೊಲೀಸರ ಮುಂದೆ ನೀಡಿರುವ ಹೇಳಿಕೆಗಳೇ ದೊಡ್ಡ ಸಂಕಷ್ಟ ತರುವಂತಿದೆ.
ಚಿಕ್ಕಣ್ಣ ಅವರು ದರ್ಶನ್ ಅವರ ಆಪ್ತ ಬಳಗದಲ್ಲಿ ಒಬ್ಬರಾಗಿದ್ದಾರೆ. ರೇಣುಕಾಸ್ವಾಮಿ ಹತ್ಯೆ ನಡೆದ ದಿನ ದರ್ಶನ್ ಅವರು ಚಿಕ್ಕಣ್ಣ ಜತೆ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡಿದ್ದಾರೆ. ಈ ಸಂಬಂಧ ಕೊಲೆ ನಡೆದ ದಿನದಂದು ದರ್ಶನ್ ಅವರ ನಡವಳಿಕೆ ತಿಳಿದುಕೊಳ್ಳಲು ಚಿಕ್ಕಣ್ಣ ಅವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿತ್ತು. ಅದರಂತೆ ಚಿಕ್ಕಣ್ಣ ವಿಚಾರಣೆಗೆ ಹಾಜರಾಗಿದ್ದು, ದರ್ಶನ್ ಬಗ್ಗೆ ಈ ವೇಳೆ ಪೊಲೀಸರು ವಿಚಾರಿಸಿ ಮಾಹಿತಿಯನ್ನು ದಾಖಲು ಮಾಡಿದ್ದಾರೆ. ಇದೀಗ ಚಿಕ್ಕಣ ಹೇಳಿಕೆ ಪೊಲೀಸರಿಗೆ ಪ್ರಮುಖ ಸಾಕ್ಷಿಯಾಗಿದೆ.
ಹೌದು ಸಿಆರ್ ಪಿಸಿ 164ರ ಪ್ರಕಾರ ಚಿಕ್ಕಣ್ಣ ಅವರ ಹೇಳಿಕೆಯನ್ನು ದಾಖಲು ಮಾಡಿಕೊಂಡಿರುವ ಕಾರಣ ಅದನ್ನು ನ್ಯಾಯಾಲಯ ಸಾಕ್ಷಿ ಎಂದೇ ಪರಿಗಣಿಸುತ್ತದೆ. ಅದಲ್ಲದೆ ಮುಂದಿನ ದಿನಗಳಲ್ಲಿ ಚಿಕ್ಕಣ್ಣ ಅವರು ತನ್ನ ಹೇಳಿಕೆಯನ್ನು ಯಾವುದೇ ಕಾರಣಕ್ಕೂ ತಿರುಚಲು ಸಾಧ್ಯವಿಲ್ಲ. ವಿಚಾರಣೆ ವೇಳೆ ಚಿಕ್ಕಣ್ಣ ಅವರ ಬಳಿ ಕೊಲೆ ನಡೆದ ದಿನ ಪಾರ್ಟಿಯಲ್ಲಿ ದರ್ಶನ್ ಜತೆ ಯಾರೆಲ್ಲ ಭಾಗಿಯಾಗಿದ್ದರು, ಅವರ ನಡವಳಿಕೆ ಹೇಗಿತ್ತು, ಎಷ್ಟು ಗಂಟೆವರೆಗೆ ಪಾರ್ಟಿ ನಡೆದಿದೆ ಎಂಬುದರ ಬಗ್ಗೆ ಅವರಲ್ಲಿ ಬಾಯಿ ಬಿಡಿಸಿದ್ದಾರೆ.
ಇನ್ನೂ ಪ್ರಕರಣ ಸಂಬಂಧ ತನಿಖೆ ಚುರುಕು ಮಾಡಿರುವ ಪೊಲೀಸರು ಕೊಲೆ ನಡೆದ ದಿನ ದರ್ಶನ್ ಅವರ ಮಾಹಿತಿಯನ್ನು ಪಡೆಯಲು ಅವರ ಮನೆಯ ಸಿಸಿಟಿವಿ ದೃಶ್ಯಗಳನ್ನು ರಿಟ್ರೈವ್ ಮಾಡಿದ್ದಾರೆ. ಅದಲ್ಲದೆ ದರ್ಶನ್ ಅವರು ಧರಿಸಿದ್ದ ಬಟ್ಟೆಯನ್ನೂ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅದರಲ್ಲಿ ರಕ್ತದ ಕಲೆಗಳಿವೆ ಎಂಬುದು ಖಚಿತವಾಗಿದೆ. ಇನ್ನು ರೇಣುಕಾಸ್ವಾಮಿ ಅವರು ಪವಿತ್ರಾ ಗೌಡಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಡಿದ ಮೆಸೇಜ್‌ಗಳನ್ನು ರಿಕವರಿ ಮಾಡಿ ಸಾಕ್ಷಗಳನ್ನು ಸಂಗ್ರಹಿಸಿದ್ದಾರೆ.
ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅವರು ಜೈಲು ಸೇರಿ ಇಂದಿಗೆ ಎರಡು ತಿಂಗಳಾಗಿದೆ. ಇನ್ನು ಈ ಪ್ರಕರಣದಿಂದ ಪತಿಯನ್ನು ಹೊರತರಲು ಪತ್ನಿ ವಿಜಯಲಕ್ಷ್ಮೀ ಅವರು ಕಾನೂನು ಹೋರಾಟದ ಜತೆ ದೇವರ ಮೊರೆ ಹೋಗುತ್ತಿದ್ದಾರೆ. ಇನ್ನೊಂದೆಡೆ ಪೊಲೀಸರು ಪ್ರಮುಖ ಸಾಕ್ಷಿಗಳನ್ನು ಸಂಗ್ರಹಿಸಿ ತನಿಖೆಯನ್ನು ಮತ್ತಷ್ಟು ಚುರುಕು ಮಾಡಿದ್ದು, ದರ್ಶನ್ ಗ್ಯಾಂಗ್‌ನ ಮೇಲಿರುವ ಆರೋಪಗಳನ್ನು ಸಾಬೀತುಪಡಿಸಲು ಮಹತ್ವದ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ.
ಸಿನಿಮಾಗಳಿಗೆ ಸಪೋರ್ಟ್ ಮಾಡುತ್ತಿದ್ದ ದರ್ಶನ್ ಮೇಲೆ ಚಿಕ್ಕಣ್ಣ ಅವರಿಗೆ ಅಪಾರವಾದ ಗೌರವ. ಇಬ್ಬರೂ ಕೂಡ ರಾಜ ರಾಜೇಶ್ವರಿ ನಗರದಲ್ಲಿ ವಾಸವಿದ್ದ ಕಾರಣ ಸಹಜವಾಗಿಯೇ ಒಡನಾಟ ಹೆಚ್ಚಾಗಿತ್ತು. ದರ್ಶನ್ ಜೊತೆ ಪಾರ್ಟಿಗೆ ಹೋಗುವುದು ಕೂಡ ಸಾಮಾನ್ಯವಾಗಿತ್ತು, ಈಗ ಅದೇ ಅವರಿಗೆ ತಲೆನೋವಾಗಿದೆ.