ಬೆಂಗಳೂರು: ಉಪ್ಪಿ ರುಪ್ಪಿ ಸಿನಿಮಾಕ್ಕಾಗಿ ನೀಡಿದ ಮುಂಗಡ ಹಣ ವಾಪಸ್ ಕೊಡದ ಆರೋಪದಲ್ಲಿ ನಟಿ ರಚಿತಾ ರಾಮ್ ವಿರುದ್ಧ ಫಿಲ್ಮ್ ಚೇಂಬರ್‌ನಲ್ಲಿ ಮತ್ತೊಂದು ದೂರು ದಾಖಲಾಗಿದೆ.
ನಟಿ ರಚಿತಾ ರಾಮ್ ವಿರುದ್ಧ ಸಂಜು ವೆಡ್ಸ್ ಗೀತಾ-2 ಚಿತ್ರತಂಡ ತಿರುಗಿ ಬಿದ್ದಿರುವ ಬೆನ್ನಲ್ಲೇ ಇದೀಗ ನಟಿಯ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.
ಸ್ಯಾಂಡಲ್‌ವುಡ್‌ನ ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಅವರಿಗೆ ಉಪ್ಪಿ ರುಪ್ಪಿ ಸಿನಿಮಾಕ್ಕಾಗಿ ಅಡ್ವಾನ್ಸ್ ನೀಡಲಾಗಿತ್ತು. ಈಗ ಹಣ ವಾಪಸ್ ಕೊಡದೇ ನಿರ್ಮಾಪಕಿಯನ್ನು ಸತಾಯಿಸುತ್ತಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
8 ವರ್ಷಗಳ ಹಿಂದೆ ಉಪ್ಪಿ ಮತ್ತು ರಚಿತಾ ನಟನೆಯಲ್ಲಿ ಸಿನಿಮಾ ಮೂಡಿಬರಬೇಕಿತ್ತು. ಉಪ್ಪಿ ರುಪ್ಪಿ ಸಿನಿಮಾದಲ್ಲಿ ಉಪೇಂದ್ರ ಜೊತೆ ನಟಿಸಲು ನಟಿ ಒಪ್ಪಿಕೊಂಡಿದ್ದರು. ಈ ಸಿನಿಮಾವನ್ನು ವಿಜಯಲಕ್ಷ್ಮಿ ಅರಸ್ ನಿರ್ಮಾಣ ಮತ್ತು ಕೆ.ಮಾದೇಶ್ ನಿರ್ದೇಶನ ಮಾಡುವುದಿತ್ತು.
₹23 ಲಕ್ಷ ಸಂಭಾವನೆಗೆ ನಟಿ ಕಮಿಟ್ ಆಗಿದ್ದರು. ಮುಂಗಡವಾಗಿ ₹ 13 ಲಕ್ಷ ಅಡ್ವಾನ್ಸ್ ರೂಪದಲ್ಲಿ ಹಣ ಪಡೆದಿದ್ದರು. 2017 ರಲ್ಲಿ ಬ್ಯಾಂಕಾಕ್‌ನಲ್ಲಿ ಶೂಟಿಂಗ್‌ಗೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಬರುವುದಾಗಿ ಒಪ್ಪಿಕೊಂಡು ರಚಿತಾ ರಾಮ್‌ಗೆ ಟಿಕೆಟ್ ಬುಕ್ ಮಾಡಿದ್ದರು. ಆದರೆ, ಬಂದಿರಲಿಲ್ಲ. 15 ದಿನಗಳ ಕಾಲ ಈಗ ಬರ್ತೀನಿ, ಆಗ ಬರ್ತೀನಿ ಅಂತಾ ಸತಾಯಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.