ತಮಿಳುನಾಡಿ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ದಳಪತಿ ವಿಜಯ್‌

Sampriya

ಗುರುವಾರ, 22 ಆಗಸ್ಟ್ 2024 (14:19 IST)
Photo Courtesy X
ಚೆನ್ನೈ: ಕಾಲಿವುಡ್‌ನಲ್ಲಿ ಸೂಪರ್‌ ಹಿಟ್‌ ಚಿತ್ರಗಳನ್ನು ನೀಡಿ ಮನೆಮಾತಾಗಿರುವ ದಳಪತಿ ವಿಜಯ್‌ ಅವರು ತಮಿಳುನಾಡು ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭಿಸಿದ್ಧಾರೆ.

ತಮಿಳು ನಟ ವಿಜಯ್‌ ಕೆಲ ತಿಂಗಳ ಹಿಂದೆ ತಮಿಳಗ ವೆಟ್ರಿ ಕಳಗಂ ಎಂಬ ರಾಜಕೀಯ ಪಕ್ಷ ಸ್ಥಾಪನೆ ಮಾಡಿದ್ದರು.  ಗುರುವಾರ ನಟ ವಿಜಯ್ ಅವರು ಪಕ್ಷದ ಹೊಸ ಧ್ವಜ ಬಿಡುಗಡೆ ಮಾಡಿದರು. ಈ ಮೂಲಕ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಸಿದ್ಧತೆ ಆರಂಭಿಸಿದ್ದಾರೆ. ಟಿವಿಕೆ ಪಕ್ಷದ ಕಚೇರಿಯಲ್ಲಿ ಪಕ್ಷದ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಅವರು ಪಕ್ಷದ ಧ್ವಜವನ್ನು ಬಿಡುಗಡೆ ಮಾಡಿದರು.  

ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ, ತಮಿಳುನಾಡಿನ ಮಣ್ಣಿನಿಂದ ನಮ್ಮ ಜನರ ಹಕ್ಕುಗಳಿಗಾಗಿ ಶೌರ್ಯದಿಂದ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಅಸಂಖ್ಯಾತ ಸೈನಿಕರ ತ್ಯಾಗವನ್ನು ನಾನು ಯಾವಾಗಲೂ ಸ್ಮರಿಸುತ್ತೇನೆ. ತಮಿಳು ಭಾಷೆಯನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಹುತಾತ್ಮರನ್ನು ಸ್ಮರಣೆ ಮಾಡುತ್ತ ಅವರ ದಾರಿಯಲ್ಲಿ ನಡೆಯುತ್ತೇನೆ. ಭಾರತದ ಸಂವಿಧಾನ ಮತ್ತು ಭಾರತದ ಸಾರ್ವಭೌಮತ್ವದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಧ್ವಜವನ್ನು ಬಿಡುಗಡೆ ಮಾಡಿ ವಿಜಯ್‌ ಹೇಳಿದರು.

ಸಹೋದರತ್ವ, ಸಮಾನತೆ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯದ ಹಾದಿಯಲ್ಲಿ ನಡೆಯುತ್ತ ಜನರ ಸೇವೆ ಮಾಡುತ್ತೇನೆ ಎಂದು ಭರವಸೆ ನೀಡುತ್ತೇನೆ ಎಂದು ವಿಜಯ್‌ ಹೇಳಿದರು.

2026ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದೆ. ಪ್ರಸ್ತುತ ಸ್ಟಾಲಿನ್‌ ನೇತೃತ್ವದ ಡಿಎಂಕೆ ಪಕ್ಷ ಅಧಿಕಾರದಲ್ಲಿದೆ. ತಮಿಳುನಾಡಿನಲ್ಲಿ ಡಿಎಂಕೆ, ಅಣ್ಣಾ ಡಿಎಂಕೆ, ಬಿಜೆಪಿ ಬಲಿಷ್ಠವಾಗಿದ್ದು, ಆ ಪಕ್ಷಗಳಿಗೆ ಸೆಡ್ಡು ಹೊಡೆಯಲು ವಿಜಯ್‌ ಸಿದ್ಧತೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ