ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಬಂಧನದಲ್ಲಿರುವ ನಟ ದರ್ಶನ್ ಸೇರಿದಂತೆ 17 ಆರೋಪಿಗಳನ್ನು ಇಂದು ಮತ್ತೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.
ಇಂದಿಗೆ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾದ ಹಿನ್ನಲೆಯಲ್ಲಿ ದರ್ಶನ್ ಆಂಡ್ ಗ್ಯಾಂಗ್ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮತ್ತೊಮ್ಮೆ ತಾವಿರುವ ಜೈಲಿನಿಂದಲೇ ನ್ಯಾಯಾಧೀಶರ ಮುಂದೆ ಹಾಜರಾದರು. ಈ ವೇಳೆ ನ್ಯಾಯಾಧೀಶರು ಪ್ರತಿಯೊಬ್ಬರನ್ನೂ ವಿಚಾರಿಸಿಕೊಂಡ ಬಳಿಕ ಇನ್ನೂ ಒಂದು ದಿನಕ್ಕೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿದರು.
24 ನೇ ಎಸಿಎಂಎಂ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಕಮಿಟಲ್ ಆದೇಶಕ್ಕೆ ಆರೋಪಿಗಳ ಪರ ವಕೀಲರಿಂದ ವಿರೋಧ ವ್ಯಕ್ತವಾಗಿದ್ದರಿಂದ ಇನ್ನೂ ಒಂದು ದಿನಕ್ಕೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಲಾಯಿತು. ಈ ವೇಳೆ ಡಿಜಿಟಲ್ ಸಾಕ್ಷ್ಯ ಒದಗಿಸಲು ಇನ್ನೂ ಒಂದು ವಾರ ಬೇಕಾಗುತ್ತದೆ ಎಂದು ಎಸ್ ಪಿಪಿ ವಾದ ಮಂಡಿಸಿದ್ದಾರೆ.
ಡಾಕ್ಯುಮೆಂಟ್, ಪೆನ್ ಡ್ರೈವ್, ಸಿಡಿ, ಡಿವಿಆರ್ ಕೊಟ್ಟಿಲ್ಲ. ಅದನ್ನು ನಾಳೆಗೆ ಕೇಳಿದ್ದೇವೆ. ಕಮಿಟಲ್ ಆರ್ಡರ್ ಆದ ಬಳಿಕ ಸೆಷನ್ ಕೋರ್ಟ್ ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸುವುದಾಗಿ ದರ್ಶನ್ ಪರ ವಕೀಲರು ಹೇಳಿದ್ದಾರೆ. ಇದರೊಂದಿಗೆ ದರ್ಶನ್ ಆಂಡ್ ಗ್ಯಾಂಗ್ ಸೆರೆ ವಾಸ ಮತ್ತೊಂದು ದಿನಕ್ಕೆ ಮುಂದುವರಿದಿದೆ.