ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದ ಬಳಿಕ ಮತ್ತೆ ಡಿಬಾಸ್ ಹವಾ ಶುರುವಾಗಿದೆ. ಇಂದು ಮನೆ ಮುಂದೆ ಬಂದಿದ್ದ ಅಭಿಮಾನಿಗಳನ್ನು ದರ್ಶನ್ ಭೇಟಿಯಾಗಿದ್ದಾರೆ.
ದರ್ಶನ್ ಮನೆ ಮುಂದೆ ಭಾನುವಾರಗಳಂದು ಜನರು ಕ್ಯೂ ನಿಂತು ಅವರನ್ನು ಭೇಟಿಯಾಗುವ ಪರಿಪಾಠವಿತ್ತು. ರಾಜ ರಾಜೇಶ್ವರಿ ನಗರದ ಮನೆ ಮುಂದೆ ಹೀಗಾಗಿ ನಿತ್ಯವೂ ಜನರಿಂದ ತುಂಬಿ ತುಳುಕುತ್ತಿತ್ತು. ಆದರೆ ದರ್ಶನ್ ಕೊಲೆ ಕೇಸ್ ನಲ್ಲಿ ಸಿಲುಕಿಕೊಂಡ ಮೇಲೆ ಇದು ಕಡಿಮೆಯಾಗಿತ್ತು.
ಜೈಲಿನಿಂದ ಹೊರಬಂದ ಮೇಲೆ ತಾವಾಯಿತು ತಮ್ಮ ಕುಟುಂಬವಾಯಿತು ಎನ್ನುವಂತಿದ್ದ ದರ್ಶನ್ ಇದೀಗ ಮತ್ತೆ ಅಭಿಮಾನಿಗಳನ್ನು ಎಂದಿನಂತೆ ಮನೆ ಮುಂದೆ ಭೇಟಿಮಾಡಿದ್ದಾರೆ. ಇಂದು ದರ್ಶನ್ ನೋಡಲು ಜನ ಕ್ಯೂನಲ್ಲಿ ನಿಂತಿದ್ದು ಕಂಡುಬಂದಿದೆ. ಎಲ್ಲರಿಗೂ ಕೈ ಕುಲುಕಿ ದರ್ಶನ್ ಹಾರೈಸಿ ಕಳುಹಿಸಿದ್ದಾರೆ.
ಇನ್ನು, ಸಿನಿಮಾ ವಿಚಾರಕ್ಕೆ ಬಂದರೆ ದರ್ಶನ್ ಇದೀಗ ಚಿತ್ರೀಕರಣ ಹಂತದಲ್ಲಿರುವ ಡೆವಿಲ್ ಬಗ್ಗೆ ಮಾತ್ರ ಗಮನಕೇಂದ್ರೀಕರಿಸಲಿದ್ದಾರೆ ಎನ್ನಲಾಗಿದೆ. ಅದಾದ ಬಳಿಕ ಜೋಗಿ ಪ್ರೇಮ್ ಜೊತೆ ಸಿನಿಮಾ ಮಾಡಲಿದ್ದಾರೆ. ಆದರೆ ಉಳಿದ ಸಿನಿಮಾಗಳ ಅಡ್ವಾನ್ಸ್ ಹಣವನ್ನು ಮರಳಿಸುತ್ತಿದ್ದಾರೆ ಎಂಬ ಸುದ್ದಿಯಿದೆ.