ಜೈಲಿನಿಂದ ಬಂದ ಮೇಲೆ ಕೆಲವು ಸಿನಿಮಾಗಳ ಅಡ್ವಾನ್ಸ್ ವಾಪಸ್ ಮಾಡ್ತಿದ್ದಾರಂತೆ ದರ್ಶನ್

Krishnaveni K

ಭಾನುವಾರ, 2 ಫೆಬ್ರವರಿ 2025 (09:07 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಮೇಲೆ ನಟ ದರ್ಶನ್ ಬದಲಾಗುತ್ತಿದ್ದಾರೆ. ಅವರಿಗೆ ಈಗ ಆರೋಗ್ಯವೂ ಕೈ ಕೊಟ್ಟಿದೆ. ಈ ನಡುವೆ ಕೆಲವು ಸಿನಿಮಾಗಳಿಗೆ ಪಡೆದಿದ್ದ ಅಡ್ವಾನ್ಸ್ ಹಣವನ್ನು ಹಿಂಪಡೆಯುತ್ತಿದ್ದಾರೆ ಎನ್ನುವ ಸುದ್ದಿಯಿದೆ.

ನಟ ದರ್ಶನ್ ಗೆ ಬಳ್ಳಾರಿ ಜೈಲಿನಲ್ಲಿದ್ದಾಗ ಬೆನ್ನು ನೋವು ತೀವ್ರವಾಗಿ ಕಾಡಿತ್ತು. ಇದಕ್ಕೆ ಒಂದು ತಿಂಗಳು ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆದಿದ್ದರು. ಹೀಗಾಗಿ ಅವರು ಈಗ ಜಾಮೀನು ಪಡೆದು ಹೊರಬಂದರೂ ಇದ್ದಕ್ಕಿದ್ದಂತೆ ಶೂಟಿಂಗ್ ನಲ್ಲಿ ಪಾಲ್ಗೊಂಡಿಲ್ಲ.

ದರ್ಶನ್ ಸಿನಿಮಾ ಮಾಡುತ್ತಾರೆಂದು ಅವರಿಗೆ ಅಡ್ವಾನ್ಸ್ ಕೊಟ್ಟಿದ್ದ ನಿರ್ಮಾಪಕರೂ ಎದುರು ನೋಡುತ್ತಿದ್ದರು. ಆದರೆ ಕಾನೂನಿನ ಕುಣಿಕೆಯಲ್ಲಿರುವ ದರ್ಶನ್ ಗೆ ಈಗ ಮೊದಲಿನಂತೆ ಎಲ್ಲಾ ಕಡೆ ಓಡಾಡಲು ಸಾಧ್ಯವಾಗುತ್ತಿಲ್ಲ. ಎಲ್ಲಿಗೇ ಹೋಗಬೇಕಾದರೂ ಕೋರ್ಟ್ ಒಪ್ಪಿಗೆ ಬೇಕು. ಹೀಗಾಗಿ ಅವರ ಸಿನಿ ಕೆರಿಯರ್ ಮುಂದೆ ಸಾಗುತ್ತಿಲ್ಲ.

ಹೀಗಾಗಿ ದರ್ಶನ್ ಕೆವಿಎನ್ ಪ್ರೊಡಕ್ಷನ್ಸ್, ಸೂರಪ್ಪ ಬಾಬು ಜೊತೆ ಮಾಡಬೇಕಿದ್ದ ಸಿನಿಮಾಗಾಗಿ ಪಡೆದಿದ್ದ ಅಡ್ವಾನ್ಸ್ ಹಣವನ್ನು ವಾಪಸ್ ಮಾಡಿದ್ದಾರೆ ಎಂಬ ಗುಸು ಗುಸು ಕೇಳಿಬರುತ್ತಿದೆ. ತಮ್ಮ ಆರೋಗ್ಯ ಮತ್ತು ಕಾನೂನು ಹೋರಾಟದ ದೃಷ್ಟಿಯಿಂದ ಕೆಲವೊಂದು ಪ್ರಾಜೆಕ್ಟ್ ಗಳನ್ನು ಕೈ ಬಿಡುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ