ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ ಆಂಡ್ ಗ್ಯಾಂಗ್ ಪೈಕಿ ಎ1 ಆರೋಪಿ ಪವಿತ್ರಾ ಗೌಡ ನ್ಯಾಯಾಂಗ ಬಂಧನ ಅವಧಿ ಇಂದಿಗೆ ಮುಕ್ತಾಯವಾಗಲಿದೆ. ಈ ಹಿನ್ನಲೆಯಲ್ಲಿ ಇಂದು ಅವರ ಮುಂದಿನ ಭವಿಷ್ಯ ತೀರ್ಮಾನವಾಗಲಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಒಟ್ಟು 19 ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪೈಕಿ ಜೂನ್ 20 ರಂದು ಪವಿತ್ರಾ ಗೌಡ ಸೇರಿದಂತೆ 14 ಆರೋಪಿಗಳಿಗೆ ಜೂನ್ 4 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ದರ್ಶನ್ ಮತ್ತು ನಾಲ್ವರು ಆರೋಪಿಗಳನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಬಳಿಕ ದರ್ಶನ್ ಮತ್ತು ಇತರೆ ಆರೋಪಿಗಳೂ ನ್ಯಾಯಾಂಗ ಬಂಧನಕ್ಕೊಳಗಾಗಿದ್ದರು.
ಈ ಪೈಕಿ ನಾಲ್ವರು ಆರೋಪಿಗಳನ್ನು ತುಮಕೂರು ಜೈಲಿಗೆ ಸ್ಥಳಾಂತರಿಸಲಾಗಿತ್ತು. ಉಳಿದ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಜೂನ್ 20 ರಂದು ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಪವಿತ್ರಾ ಗೌಡ ಮತ್ತು ಇತರೆ ಆರೋಪಿಗಳ ನ್ಯಾಯಾಂಗ ಬಂಧನ ಅವಧಿಗೆ ಇಂದಿಗೆ ಮುಕ್ತಾಯವಾಗುತ್ತಿದೆ.
ಈ ಹಿನ್ನಲೆಯಲ್ಲಿ ಇಂದು ಅವರ ಮುಂದಿನ ಭವಿಷ್ಯವೇನೆಂದು ಕೋರ್ಟ್ ನಲ್ಲಿ ತೀರ್ಮಾನವಾಗಲಿದೆ. ಆದರೆ ಇಂದು ನೇರವಾಗಿ ಆರೋಪಿಗಳು ಕೋರ್ಟ್ ಗೆ ಹಾಜರಾಗಲ್ಲ. ಬದಲಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರು ವಿಚಾರಣೆ ನಡೆಸಲಿದ್ದಾರೆ. ದರ್ಶನ್ ಮತ್ತು ಗ್ಯಾಂಗ್ ಕರೆತರುವ ವೇಳೆ ಸಾಕಷ್ಟು ಅಭಿಮಾನಿಗಳು ಸೇರಿ ತೊಂದರೆಯಾಗುತ್ತಿದೆ. ಈ ಕಾರಣಕ್ಕೆ ನೇರವಾಗಿ ಕೋರ್ಟ್ ಗೆ ಹಾಜರುಪಡಿಸಲಾಗುತ್ತಿಲ್ಲ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಎ1 ಆರೋಪಿಯಾಗಿದ್ದು, ದರ್ಶನ್ ಎ2 ಆರೋಪಿಯಾಗಿದ್ದಾರೆ. ಅವರಿಗೆ ಸುಲಭವಾಗಿ ಜಾಮೀನು ಸಿಗುವ ಸಾಧ್ಯತೆಯಂತೂ ಇಲ್ಲ. ಹೀಗಾಗಿ ನಿನ್ನೆ ಪವಿತ್ರಾರನ್ನು ಭೇಟಿ ಮಾಡಿದ್ದ ಕುಟುಂಬಸ್ಥರೂ ಸಪ್ಪೆ ಮುಖ ಮಾಡಿಕೊಂಡೇ ಹೊರಹೋಗಿದ್ದರು. ಇತ್ತ ಜೈಲಿನಲ್ಲಿರುವ ಪವಿತ್ರಾಗೂ ಆತಂಕ ಶುರುವಾಗಿದೆ.