ಬೆಂಗಳೂರು: ಮಾಸ್ತಿ ಗುಡಿ ದುರಂತ ವಿವಾದ ಮಾಸುವ ಮೊದಲೇ ದುನಿಯಾ ವಿಜಿ ಮತ್ತೊಂದು ವಿವಾದಲ್ಲಿ ಸಿಲುಕಿದ್ದಾರೆ. ಸ್ನೇಹಿತ ಶಂಕರ್ ಕೌಟುಂಬಿಕ ವಿಚಾರದಲ್ಲಿ ಮೂಗು ತೂರಿಸಿದ್ದಲ್ಲದೆ ವ್ಯಕ್ತಿಯೊಬ್ಬರಿಗೆ ಹಲ್ಲೆ ಮಾಡಿದ ಆರೋಪ ಎದುರಾಗಿದೆ.
ನಿರ್ಮಾಪಕ ಸುಂದರ್ ಪಿ ಗೌಡ ಮನೆಯಲ್ಲಿ ಪ್ರಕರಣ ನಡೆದಿದೆ ಎನ್ನಲಾಗಿದೆ. ಶಂಕರ್ ದುನಿಯಾ ವಿಜಿ ಸ್ನೇಹಿತರಾಗಿದ್ದಾರೆ. ಅವರ ಪತ್ನಿ ಮಾನಸಾ ಅವರನ್ನು ಕರೆತರಲು ಪೋಷಕರು ಬಂದಾಗ ಎರಡೂ ಕುಟುಂಬದವರ ನಡುವೆ ವಾದ ವಿವಾದವಾಗಿದೆ. ಈ ಸಂದರ್ಭದಲ್ಲಿ ಸ್ನೇಹಿತರು ಕರೆ ಮಾಡಿ ದುನಿಯಾ ವಿಜಿ ಅವರನ್ನು ಸ್ಥಳಕ್ಕೆ ಕರೆಸಿದ್ದು, ಅವರೂ ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ದುನಿಯಾ ವಿಜಿ ಮಾನಸಾ ತಂದೆ ಜಯರಾಂ ಕೆನ್ನೆಗೆ ಹೊಡೆದಿದ್ದಲ್ಲದೆ, ಎದೆಗೆ ಒದ್ದಿದ್ದಾರೆ. ಇದರಿಂದಾಗಿ ಅವರು ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಮಾನಸಾ ಮತ್ತು ಶಂಕರ್ ನಡುವೆ ವೈವಾಹಿಕ ಜೀವನದಲ್ಲಿ ಮನಸ್ತಾಪವಿತ್ತು. ಮಾನಸಾ ಅವರಿಗೆ ಹೆತ್ತವರ ಜತೆ ಸಂಪರ್ಕಿಸಲೂ ಶಂಕರ್ ಬಿಡುತ್ತಿರಲಿಲ್ಲ ಎನ್ನುವುದು ಮಾನಸಾ ಪೋಷಕರ ಆರೋಪ.
ಇದೀಗ ಗಾಯಗೊಂಡಿರುವ ಜಯರಾಂ ಶೇಖರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಪತ್ನಿ ದುನಿಯಾ ವಿಜಿ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆನ್ನಲಾಗಿದೆ. ಆದರೆ ನಂತರ ಪ್ರತಿಕ್ರಿಯಿಸಿದ ಮಾನಸಾ, ಇದು ಕೌಟುಂಬಿಕ ವಿಚಾರವಾಗಿದ್ದು, ದುನಿಯಾ ವಿಜಿ ಕೂಡಾ ನಮ್ಮ ಕುಟುಂಬದ ಸದಸ್ಯರಿದ್ದಂತೆ. ನಮ್ಮ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದಿದ್ದಾರೆ. ಅಂತೂ ದುನಿಯಾ ವಿಜಿ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ