ಬೆಂಗಳೂರು: ನಿನ್ನೆ ನಮ್ಮನ್ನಗಲಿದ ಹಿರಿಯ ನಟ ದ್ವಾರಕೀಶ್ ಅವರ ಅಂತ್ಯಕ್ರಿಯೆ ಇಂದು ಸರ್ಕಾರೀ ಗೌರವಗಳೊಂದಿಗೆ ನೆರವೇರಲಿದೆ. ಈ ಕಾರ್ಯಕ್ರಮವನ್ನು ಸಾರ್ವಜನಿಕರಿಗೂ ವೀಕ್ಷಣೆಗೆ ಅವಕಾಶವಿದೆ.
ಇಂದು ಬೆಂಗಳೂರಿನ ಚಾಮರಾಜನಗರದಲ್ಲಿರುವ ಟಿಆರ್ ಮಿಲ್ ನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಈಗಾಗಲೇ ಅವರ ಪುತ್ರ ದ್ವಾರಕೀಶ್ ನಿವಾಸದಲ್ಲಿ ಪಾರ್ಥಿವ ಶರೀರಕ್ಕೆ ಬ್ರಾಹ್ಮಣ ಸಂಪ್ರದಾಯದಂತೆ ಪೂಜೆ ನೆರವೇರಿಸಿದ್ದಾರೆ. ಇದಾದ ಬಳಿಕ ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಮಧ್ಯಾಹ್ನ 12 ಗಂಟೆಯವರೆಗೆ ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಅನುಕೂಲ ಕಲ್ಪಿಸಲಾಗಿದೆ.
ರವೀಂದ್ರ ಕಲಾಕ್ಷೇತ್ರದಿಂದ ಚಿತಾಗಾರಕ್ಕೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಗುತ್ತದೆ. ಇಲ್ಲಿ ಅವರ ಐವರು ಪುತ್ರರು ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ಕ್ರಿಯೆ ನೆರವೇರಿಸಲಿದ್ದಾರೆ. ದ್ವಾರಕೀಶ್ ಹೆಸರಾಂತ ನಟನಾಗಿದ್ದು, ಅವರ ಅಂತಿಮ ವಿಧಿವಿಧಾನಗಳು ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ.
ಇಂದು ಡಿಸಿಎಂ ಡಿಕೆ ಶಿವಕುಮಾರ್ ಅಂತಿಮ ದರ್ಶನ ಪಡೆಯಲಿದ್ದಾರೆ. ಅಲ್ಲದೆ, ಚಿತ್ರರಂಗದ ಮತ್ತಷ್ಟು ಗಣ್ಯರು ಇಂದು ಅಂತಿಮ ದರ್ಶನ ಪಡೆಯುವ ಸಾಧ‍್ಯತೆಯಿದೆ. ದ್ವಾರಕೀಶ್ ಗೌರವಾರ್ಥ ಇಂದು ಮಧ್ಯಾಹ್ನವರೆಗೆ ಚಿತ್ರಮಂದಿರ ಬಂದ್ ಮಾಡಿ ಗೌರವ ಸಲ್ಲಿಸಲಾಗುತ್ತಿದೆ.
ನಟ ದರ್ಶನ್, ಶಿವರಾಜ್ ಕುಮಾರ್, ಸುಂದರ್ ರಾಜ್, ಮೇಘನಾ ರಾಜ್, ಭವ್ಯಾ ಸೇರಿದಂತೆ ಅನೇಕ ಚಿತ್ರರಂಗದ ಗಣ್ಯರು ಈಗಾಗಲೇ ಅಂತಿಮ ದರ್ಶನ ಪಡೆದಿದ್ದಾರೆ. ಸದ್ಯಕ್ಕೆ ಕಿಚ್ಚ ಸುದೀಪ್ ಚೆನ್ನೈನಲ್ಲಿ ಶೂಟಿಂಗ್ ನಲ್ಲಿದ್ದು ಅವರೂ ಇಂದು ಬೆಂಗಳೂರಿಗೆ ಬಂದು ಅಂತಿಮ ದರ್ಶನ ಪಡೆಯುವ ಸಾಧ‍್ಯತೆಯಿದೆ.