ಕನ್ನಡಿಗರನ್ನು ರೋಮಾಂಚನಗೊಳಿಸಿದ `ಗೀತಾ’ ಟ್ರೇಲರ್!

ಗುರುವಾರ, 12 ಸೆಪ್ಟಂಬರ್ 2019 (13:32 IST)
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಚಿತ್ರ ಇದೇ ತಿಂಗಳ 27ರಂದು ತೆರೆಗಾಣಲು ರೆಡಿಯಾಗಿದೆ. ಇತ್ತೀಚೆಗಷ್ಟೇ ಸಂತೋಷ್ ಆನಂದ್ರಾಮ್ ಬರೆದ ಕನ್ನಡ ತನದ ಲಿರಿಕಲ್ ವೀಡಿಯೋ ಒಂದರ ಮೂಲಕ ಸದ್ದು ಮಾಡಿದ್ದ ಟ್ರೇಲರ್ ಇದೀಗ ಬಿಡುಗಡೆಗೊಂಡಿದೆ. ಗಣೇಶ್ ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಗೀತಾ ತನ್ನ ವೃತ್ತಿ ಜೀವನದಲ್ಲಿಯೇ ವಿಶೇಷ ಚಿತ್ರವೆಂದು ಹೇಳಿಕೊಂಡಿದ್ದರು. ಈಗ ಬಂದಿರೋ ಟ್ರೇಲರ್ ತುಂಬಾ ಅದಕ್ಕೆ ಸಾಕ್ಷೆಯೆಂಬಂಥಾ ಸನ್ನಿವೇಶಗಳಿದ್ದಾವೆ!
ಈ ಟ್ರೇಲರ್ನಲ್ಲಿ ಪ್ರಧಾನವಾಗಿ ಮೂಡಿ ಬಂದಿರೋದು ಕನ್ನಡಪರ ಹೋರಾಟದ ಝಲಕ್. ಅದರ ಹಿನ್ನೆಲೆಯಲ್ಲಿಯೇ ಡೀಪ್ ಆದೊಂದು ವಿಭಿನ್ನ ಪ್ರೇಮ ಕಥೆಯ ಸುಳಿವೂ ಕೂಡಾ ಈ ಟ್ರೇಲರ್ ಮೂಲಕವೇ ಸಿಕ್ಕಿದೆ. ಇದರಲ್ಲಿ ಗಣೇಶ್ ಕಡೆಯಿಂದ ಕೇಳಿಸಿರೋ ಕನ್ನಡಾಭಿಮಾನವನ್ನು ಕೆರಳಿಸುವಂಥಾ ಡೈಲಾಗ್ಗಳು, ಅವರ ಹೋರಾಟಗಾರನ ಮಾಸ್ ಲುಕ್ಕುಗಳು ಅಭಿಮಾನಿಳೆಲ್ಲ ಥ್ರಿಲ್ ಆಗುವಂತೆ ಮೂಡಿ ಬಂದಿದೆ. ಈ ಹಿಂದೆ ಲಿರಿಕಲ್ ವೀಡಿಯೋ ಬಿಡುಗಡೆಯಾದಾಗ ಈ ಸಿನಿಮಾದಲ್ಲಿ ಗೋಕಾಕ್ ಚಳುವಳಿಯನ್ನು ಮರುಸೃಷ್ಟಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಟ್ರೇಲರ್ ಅದು ಎಷ್ಟು ಪರಿಣಾಮಕಾರಿಯಾಗಿದೆ ಅನ್ನೋದನ್ನು ಸೂಚಿಸುವಂತಿದೆ.
 
ಸೈಯದ್ ಸಲಾಮ್ ಮತ್ತು ಶಿಲ್ಪಾ ಗಣೇಶ್ ನಿರ್ಮಾಣ ಮಾಡಿರೋ ಈ ಸಿನಿಮಾ ಗಣೇಶ್ ಅವರ ಹೋಂಬ್ಯಾನರಿನ ಚಿಚ್ಚಲ ಕೊಡುಗೆ. ಆರಂಭದಿಂದ ಇಲ್ಲೀವರೆಗೂ ಥರ ಥರದ ಕ್ರಿಯೇಟಿವ್ ಅಂಶಗಳೊಂದಿಗೆ ಸದ್ದು ಮಾಡುತ್ತಾ ಸಾಗಿ ಬಂದಿರೋ ಈ ಚಿತ್ರವೀಗ ಬಿಡುಗಡೆಯ ಹೊಸ್ತಿಲಲ್ಲಿದೆ. ತೆರೆಗಾಣಲು ಇನ್ನೇನು ಎರಡು ವಾರವಷ್ಟೇ ಬಾಕಿ ಉಳಿದಿರುವಾಗ ಈ ಚೆಂದದ ಟ್ರೇಲರ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ಇದನ್ನು ಗಮನಿಸಿದರೆ ಖಂಡಿತಾ ಇದು ಗಣೇಶ್ ಪಾಲಿಗೆ ಮತ್ತೊಂದು ಗೋಲ್ಡನ್ ಗೆಲುವು ತಂದುಕೊಡುತ್ತದೆಂಬ ಭರವಸೆ ಮೂಡಿಕೊಳ್ಳುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ