ಪ್ರಥಮಗಳ ದೇವರೇ.. ಅಮ್ಮ ಹೋಗಿ ಬನ್ನಿ: ಕಿಚ್ಚ ಸುದೀಪ್ ತಾಯಿ ನಿಧನಕ್ಕೆ ಜಗ್ಗೇಶ್ ಸಂತಾಪ

Sampriya

ಭಾನುವಾರ, 20 ಅಕ್ಟೋಬರ್ 2024 (13:17 IST)
Photo Courtesy X
ಬೆಂಗಳೂರು: ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಇಂದು ಅನಾರೋಗ್ಯದಿಂದ ಇಂದು ವಿಧಿವಶರಾಗಿದ್ದಾರೆ. ಅವರ ನಿಧನಕ್ಕೆ ರಾಜಕೀಯ ಮುಖಂಡರು, ಸಿನಿ ರಂಗದ ಕಲಾವಿದರು ಕಂಬನಿ ಮಿಡಿದಿದ್ದಾರೆ.

ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ, ಹಿರಿಯ ನಟ ಜಗ್ಗೇಶ್ ಸೇರಿದಂತೆ ಇತರ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಪ್ರಥಮ ಶ್ವಾಸ, ಪ್ರಥಮ ವಿಶ್ವದರ್ಶನ ಪರಿಚಯ, ಪ್ರಥಮ ಆಹಾರ, ಪ್ರಥಮ ತೊದಲುನುಡಿ, ಪ್ರಥಮ ದೇವರು, ನಮಗೆ ನೋವಾದಾಗ ಕೂಗುವ ಮೊದಲ ದೇವರು ಅಮ್ಮ... ಅವಳು ಹೋದಮೇಲು ನಮ್ಮ ಕಡೆಯ ಉಸಿರಿನವರೆಗು ಹೃದಯದಲ್ಲಿ ಅಚ್ಚಳಿಯದೆ ಉಳಿವ ದೇವರು ಅಮ್ಮ...ಪ್ರಥಮಗಳ ದೇವರೆ ಅಮ್ಮ ಹೋಗಿ ಬನ್ನಿ ಎಂದು ನಟ ಜಗ್ಗೇಶ್‌ ಎಕ್ಸ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

ಖ್ಯಾತ ಚಲನಚಿತ್ರ ನಟ ಹಾಗೂ ಆತ್ಮೀಯರಾದ ಕಿಚ್ಚ ಸುದೀಪ್‌ ಅವರ ತಾಯಿ ಶ್ರೀಮತಿ ಸರೋಜಾ ಅವರು ನಿಧನರಾಗಿರುವ ಸುದ್ದಿ ತಿಳಿದು ತೀವ್ರ ದುಃಖಿತನಾಗಿದ್ದೇನೆ. ನಟ ಸುದೀಪ್ ಹಾಗೂ ಅವರ ಕುಟುಂಬ ವರ್ಗದವರಿಗೆ ಅವರ ತಾಯಿಯ ನಿಧನದ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ, ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ದುಃಖ ವ್ಯಕ್ತಪಡಿಸಿದ್ದಾರೆ.

ಕಿಚ್ಚ ಸುದೀಪ್ ಅವರ ತಾಯಿ ಶ್ರೀಮತಿ ಸರೋಜಾ ಅವರು ದೈವಾಧೀನರಾದ ಸುದ್ದಿ ತಿಳಿದು ಮನಸ್ಸಿಗೆ ಅಪಾರ ನೋವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಸುದೀಪ್ ಅವರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಿ.ಕೆ ಶಿವಕುಮಾರ್‌ ಅವರು ಸಂತಾಪ ಸೂಚಿಸಿದ್ದಾರೆ.

ಖ್ಯಾತ ನಟ ಸುದೀಪ್ ಅವರ ಮಾತೃಶ್ರೀ ಶ್ರೀಮತಿ ಸರೋಜಾ ಸಂಜೀವ್ ಅವರ ನಿಧನಕ್ಕೆ ಸಂತಾಪ ಕೋರುವೆ. ಖ್ಯಾತ ನಿರ್ಮಾಪಕರಾದ ಸಂಜೀವ್ ಅವರ ಧರ್ಮ ಪತ್ನಿಯೂ ಆದ ಮೃತರ ಅಗಲಿಕೆಯ ನೋವು ಸಹಿಸುವ ಶಕ್ತಿ ಕುಟುಂಬ ವರ್ಗಕ್ಕೆ ದೇವರು ಕರುಣಿಸಲಿ, ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸುವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ