ಕೇಂದ್ರದ ವಿರುದ್ಧ ಮತ್ತೆ ನಮ್ಮ ತೆರಿಗೆ ನಮ್ಮ ಹಕ್ಕು ಪ್ರತಿಭಟನೆ: ಡಿಕೆ ಶಿವಕುಮಾರ್ ಘೋಷಣೆ

Krishnaveni K

ಶನಿವಾರ, 12 ಅಕ್ಟೋಬರ್ 2024 (14:08 IST)
ಬೆಂಗಳೂರು: ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಮತ್ತೊಮ್ಮೆ ನಮ್ಮ ತೆರಿಗೆ ನಮ್ಮ ಹಕ್ಕು ಪ್ರತಿಭಟನೆ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ತೆರಿಗೆ ಹಣ ಹಂಚಿಕೆ ಮಾಡಿದ್ದು, ಕರ್ನಾಟಕಕ್ಕೆ ನಿರೀಕ್ಷಿಸಿದಷ್ಟು ಹಣ ಕೊಟ್ಟಿಲ್ಲ ಎಂಬುದು ಕಾಂಗ್ರೆಸ್ ಆರೋಪವಾಗಿದೆ. ಈ ಬಗ್ಗೆ ನಿನ್ನೆಯೇ ಮಾಜಿ ಸಂಸದ ಡಿಕೆ ಸುರೇಶ್ ಕಿಡಿ ಕಾರಿದ್ದರು. ನಾವೆಲ್ಲರೂ ಭಾರತಾಂಬೆಯ ಮಕ್ಕಳು. ಉತ್ತರ ಪ್ರದೇಶಕ್ಕೆ ಮಾತ್ರ ಹೆಚ್ಚು ಕೊಟ್ಟಿದ್ದೀರಿ. ಕರ್ನಾಟಕಕ್ಕೆ ಕಡಿಮೆ ಯಾಕೆ ಎಂದು ಪ್ರಶ್ನೆ ಮಾಡಿದ್ದರು.

ಇದೀಗ ಡಿಸಿಎಂ ಡಿಕೆ ಶಿವಕುಮಾರ್, ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಮತ್ತೊಮ್ಮೆ ನಮ್ಮ ತೆರಿಗೆ ನಮ್ಮ ಹಕ್ಕು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅತಿ ಹೆಚ್ಚು ತೆರಿಗೆ ಪಾವತಿಸುವ ನಮಗೆ ತಾರತಮ್ಯ ಮಾಡುತ್ತಾರೆ. ಉತ್ತರ ಪ್ರದೇಶ, ಬಿಹಾರಕ್ಕೆ ಹೆಚ್ಚು ಹಣ ಕೊಡುತ್ತಾರೆ. ನಮಗೆ ಆಂಧ್ರಪ್ರದೇಶಕ್ಕಿಂತಲೂ ಕಡಿಮೆ ಕೊಡುತ್ತಾರೆ. ಹಾಗಿದ್ದರೆ ನಾವು ಅವರಿಗಿಂತಲೂ ಕೀಳಾ ಎಂದು ಪ್ರಶ್ನೆ ಮಾಡಿದ್ದಾರೆ.

ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ರಾಜ್ಯದಿಂದ ಐವರು ಕೇಂದ್ರ ಸಚಿವರಿದ್ದಾರೆ. ಆದರೆ ಯಾರೂ ರಾಜ್ಯದ ಪರವಾಗಿ ಧ್ವನಿಯೆತ್ತುವುದಿಲ್ಲ. ನಮ್ಮವರೇ ಇದ್ದರೂ ನಮಗೆ ಅನ್ಯಾಯವಾಗುತ್ತಿದೆ. ಇದರ ವಿರುದ್ಧ ಪ್ರತಿಭಟನೆ ಮಾಡಲಿದ್ದೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ