ಹಮಾರೆ ಬಾರಾಹ್‌ ಚಿತ್ರಕ್ಕೆ ಕರ್ನಾಟಕದಲ್ಲಿ ನಿಷೇಧ: ಆಕ್ರೋಶ ಹೊರಹಾಕಿದ ಆರ್‌.ಅಶೋಕ್

sampriya

ಶುಕ್ರವಾರ, 7 ಜೂನ್ 2024 (11:51 IST)
Photo By X
ಬೆಂಗಳೂರು: ಹಮಾರೆ ಬಾರಾಹ್ ಚಲನಚಿತ್ರ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ನಿಷೇಧ ಹೇರಿರುವ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್‌ ಧೋರಣೆ ಅತ್ಯಂತ ಖಂಡನೀಯ ಎಂದು ವಿಪಕ್ಷ ನಾಯಕ ಆರ್‌ ಅಶೋಕ್‌ ಅವರು ಆಕ್ರೋಶ ಹೊರಹಾಕಿದರು.

ಈ ಬಗ್ಗೆ ಎಕ್ಸ್‌ನಲ್ಲಿ ಅಸಮಾಧಾನ ಹೊರಹಾಕಿರುವ ಆರ್‌ ಅಶೋಕ್‌ ಅವರು, ದೇಶದಲ್ಲಿ ಅಸಹಿಷ್ಣುತೆ ಎಲ್ಲೆ ಮೀರಿದೆ ಎಂದು ಹತ್ತು ವರ್ಷಗಳಿಂದ ಬೊಬ್ಬಿರಿಯುತ್ತಿದ್ದವರೇ ಇಂದು ಸ್ವತಃ ಎಲ್ಲದರ ಬಗೆಗೂ ಅಸಹಿಷ್ಣುವಾಗಿದ್ದಾರೆ. ಕೇವಲ ಒಂದು ಚಲನಚಿತ್ರದ ಬಗ್ಗೆ ರಾಜ್ಯ ಕರ್ನಾಟಕ
ಸರ್ಕಾರ ಯಾಕಿಷ್ಟು ಗಲಿಬಿಲಿಗೊಂಡಿದೆ.

ಸಂವಿಧಾನದ ಏಕೈಕ ರಕ್ಷಕನಂತೆ ಸದಾಕಾಲ ಪೋಸು ಕೊಡುವ ಸಿದ್ದರಾಮಯ್ಯ ಅವರು ತಮ್ಮ ಹಾಗು ತಮ್ಮ ಪಕ್ಷದ ವೋಟ್ ಬ್ಯಾಂಕ್ ರಾಜಕಾರಣದ ನಿಜಬಣ್ಣ ಬಯಲಾಗುವ ಸಂದರ್ಭ ಬಂದರೆ ಸಂವಿಧಾನವೂ ಬೇಡ, ಹಕ್ಕುಗಳೂ ಲೆಕ್ಕಕ್ಕಿಲ್ಲ.

ಕಾಂಗ್ರೆಸ್ ಪಕ್ಷ ವಾಕ್ ಸ್ವಾತಂತ್ರ್ಯ, ಫ್ರೀಡಂ ಆಫ್ ಎಕ್ಸ್‌ಪ್ರೆಶನ್‌ ಬಗ್ಗೆ ಬೊಬ್ಬೆ ಹಾಕುತ್ತದೆ. ಇವೆಲ್ಲವೂ ಅಪಾಯದಲ್ಲಿದೆ ಎಂದು ಕಾಂಗ್ರೆಸ್ಸಿಗರು ಭಾಷಣದಲ್ಲಿ ಹೇಳುತ್ತಾರೆ. ಆದರೆ, ಆಚರಣೆ ವಿಚಾರಕ್ಕೆ ಬಂದಾಗ ಅದರ ತದ್ವಿರುದ್ಧವಾಗಿ ನಡೆದುಕೊಳ್ಳುತ್ತದೆ.

ಕಾಂಗ್ರೆಸ್ ಪಕ್ಷ ಎಂದೂ ಕೂಡ ಈ ದೇಶದ ಸಂವಿಧಾನವನ್ನು ಗೌರವಿಸುವ ಕೆಲಸ ಮಾಡಿಲ್ಲ. ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಸಂವಿಧಾನದ ಆಶಯ, ಸುಪ್ರೀಂ ಕೋರ್ಟಿನ ತೀರ್ಪನ್ನು ಧಿಕ್ಕರಿಸಿ ಈ ದೇಶದಲ್ಲಿ ತುರ್ತು ಪರಿಸ್ಥಿತಿ ತಂದರು. ಮತಬ್ಯಾಂಕ್‍ಗೆ ಧಕ್ಕೆ ಆಗುತ್ತದೆ ಎಂಬಂಥ ಸಂದರ್ಭದಲ್ಲಿ ಇಂಥ ಅನೇಕ ಸಿನಿಮಾ ಪುಸ್ತಕಗಳನ್ನು ನಿಷೇಧಿಸುವ ಕೆಲಸ ಮಾಡಿದರು.

ಅದು ಸಲ್ಮಾನ್ ರಶ್ದೀ ಅವರ ‘ದಿ ಸೆಟಾನಿಕ್ ವರ್ಸಸ್’ ಇರಬಹುದು, ತಸ್ಲಿಮಾ ನಸ್ರೀನ್ ಅವರ ಲಜ್ಜಾ ಇರಬಹುದು, ಬೇರೆಬೇರೆ ಸಂದರ್ಭದಲ್ಲಿ ಜನತಂತ್ರದ ಧ್ವನಿಯನ್ನು ಅಡಗಿಸುವ ಕೆಲಸವನ್ನು ಕಾಲಕಾಲಕ್ಕೆ ಕಾಂಗ್ರೆಸ್ ಮಾಡುತ್ತಲೇ ಬಂದಿದೆ. ಈಗ ಹಮಾರೆ ಬಾರಾಹ್ ಸಿನಿಮಾ ನಿಷೇಧ ಮಾಡಿರುವುದು ಸಹ ಅದಕ್ಕೆ ಮೂಕಸಾಕ್ಷಿಯಾಗಿ ನಿಂತಿದೆ.

ಸಿನಿಮಾಗಳು ನಮ್ಮ ಸಮಾಜದ ಅತ್ಯಂತ ಪ್ರಮುಖ ಮತ್ತು ಪ್ರಭಾವಿ ಸಮೂಹ ಮಾಧ್ಯಮ. ಚಲನಚಿತ್ರಗಳಿಗೆ ಸೂಕ್ತವಾದ ಸ್ವಾತಂತ್ರ್ಯ ಕೊಟ್ಟಾಗ ಮಾತ್ರ ಜನತಂತ್ರದ ಮೌಲ್ಯಕ್ಕೆ ಬೆಲೆ ಸಿಗುತ್ತದೆ. ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಸಿಗುತ್ತದೆ.

ಇದು ಪ್ರಜಾಪ್ರಭುತ್ವದ ನಿಜ ತತ್ತ್ವಗಳಿಗೆ ಬೆಲೆ ಇರುವ ಕಾಲ, ಸತ್ಯ ಹೊರಬರಲೇ ಬೇಕು. ತಯಾರಾಗಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ