ಎಸ್ ಪಿಬಿ ಆರೋಗ್ಯದ ಬಗ್ಗೆ ಫೇಸ್ ಬುಕ್ ಲೈವ್ ನಲ್ಲಿ ಹಂಸಲೇಖ, ರಾಜೇಶ್ ಕೃಷ್ಣನ್ ಹೇಳಿದ್ದೇನು?
ಶುಕ್ರವಾರ, 21 ಆಗಸ್ಟ್ 2020 (09:42 IST)
ಬೆಂಗಳೂರು: ಗಾನಗಂಧರ್ವ ಎಸ್ ಪಿ ಬಾಲಸುಬ್ರಮಣ್ಯಂ ಶೀಘ್ರ ಚೇತರಿಕೆಗೆ ಇಡೀ ದೇಶವೇ ಪ್ರಾರ್ಥನೆ ಮಾಡುತ್ತಿದೆ. ಕನ್ನಡ ನಾಡಿನಲ್ಲೂ ಈ ಗಾನ ಗಾರುಡಿ ಬಗ್ಗೆ ಪ್ರಾರ್ಥನೆಗಳು ನಡೆಯುತ್ತಲೇ ಇವೆ.
ಸಂಗೀತ ನಿರ್ದೇಶಕ ಹಂಸಲೇಖ, ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್, ಆಂಕರ್ ಅನುಶ್ರೀ, ಅರ್ಜುನ್ ಜನ್ಯಾ ಜೀ ಕನ್ನಡದ ಸರಿಗಮಪ ವೇದಿಕೆಯಿಂದ ಫೇಸ್ ಬುಕ್ ಲೈವ್ ನಡೆಸಿ ಎಸ್ ಪಿಬಿ ಚೇತರಿಕೆಗಾಗಿ ಪ್ರಾರ್ಥನೆ ನಡೆಸಿದ್ದಾರೆ. ಜತೆಗೆ ಎಸ್ ಪಿಬಿಗಾಗಿ ಒಂದು ನಿಮಿಷ ಎಲ್ಲರೂ ಎದ್ದು ನಿಂತು ದೇವರಲ್ಲಿ ಪ್ರಾರ್ಥನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿರುವ ಹಂಸಲೇಖ ‘ಗುರುಗಳೇ..ಇಷ್ಟು ದಿನ ನೀವು ಹೇಳಿದ್ದನ್ನು ನಾವು ಕೇಳುತ್ತಿದ್ದೆವು. ಇದೊಂದು ಬಾರಿ ನಾವು ಹೇಳಿದ್ದನ್ನು ನೀವು ಕೇಳಿ. ನಮ್ಮೆಲ್ಲರ ಪ್ರಾರ್ಥನೆ ನಿಮಗೆ ಚೇತರಿಕೆ ತರಲಿ. ಮತ್ತೆ ನೀವು ಹುಷಾರಾಗಿ ಬನ್ನಿ’ ಎಂದು ಭಾವುಕರಾಗಿ ಮಾತನಾಡಿದ್ದಾರೆ.
ಇನ್ನು, ಎಸ್ ಪಿಬಿಯನ್ನು ತನ್ನ ಮಾನಸ ಗುರು ಎಂದು ಪೂಜಿಸುವ ರಾಜೇಶ್ ಕೃಷ್ಣನ್ ‘ಅವರು ಸ್ವಲ್ಪ ಎಚ್ಚರಿಕೆ ತೆಗೆದುಕೊಂಡಿದ್ದರೆ ಈ ಸೋಂಕು ಅವರಿಗೆ ಬರುತ್ತಿರಲಿಲ್ಲವಲ್ಲಾ ಎಂಬ ಸಣ್ಣ ಕೋಪ ಹೃದಯಲ್ಲಿದೆ. ಅವರು ಬೇಗ ಚೇತರಿಸಿಕೊಳ್ಳಿ’ ಎಂದು ಭಾವುಕರಾಗಿ ಮಾತನಾಡಿದ್ದಾರೆ.