ಬೆಂಗಳೂರು: ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗದ ಕಿರೀಟ ಇದ್ದಂತೆ. ಅವರ ಸಾವು ಬಯಸಿದವರಿಗೆ ಕೇಡುಗಾಲ ಬಂದಿದೆ ಎಂದೇ ಅರ್ಥ ಎಂದು ನವರಸನಾಯಕ ಜಗ್ಗೇಶ್ ಶಾಪ ಹಾಕಿದ್ದಾರೆ. ಅಷ್ಟಕ್ಕೂ ಜಗ್ಗೇಶ್ ಸಿಟ್ಟಾಗಿದ್ದು ಯಾರ ಬಗ್ಗೆ ಇಲ್ಲಿದೆ ವಿವರ.
ಸಹ ನಟಿ ಮೇಲೆ ರೇಪ್ ಮಾಡಿ ಗರ್ಭಪಾತ ಮಾಡಿಸಿರುವ ಆರೋಪದಲ್ಲಿ ಬಂಧಿತರಾಗಿರುವ ನಟ ಮಡೆನೂರು ಮನು ಅವರದ್ದು ಎನ್ನಲಾದ ಅಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದರ್ಶನ್ ಸತ್ತೋದ, ಶಿವರಾಜ್ ಕುಮಾರ್ ಇನ್ನೊಂದು 6 ವರ್ಷ ಸತ್ತೋದ. ಆಮೇಲೆ ಕನ್ನಡ ಚಿತ್ರರಂಗವನ್ನು ಆಳುವ ಗಂಡುಗಲಿ ನಾನೇ ಎಂದೆಲ್ಲಾ ಬಡಬಡಿಸಿದ್ದ.
ಆತನ ಅಡಿಯೋ ಬಗ್ಗೆ ಕಾಮಿಡಿ ಕಿಲಾಡಿಗಳು ಜಡ್ಜ್ ಗಳಲ್ಲಿ ಒಬ್ಬರಾಗಿದ್ದ ನಟ ಜಗ್ಗೇಶ್ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗದ ಕಿರೀಟ ಇದ್ದಂತೆ. ಎಲ್ಲರನ್ನು ಪ್ರೀತಿಸುವ ಶಿವಣ್ಣನ ಸಾವು ಬಯಸಿದವರಿಗೆ ಕೇಡುಗಾಲ ಬಂದಿದೆ ಎಂದೇ ಅರ್ಥ. ನೊಂದುಕೊಳ್ಳದಿರಿ ಶಿವಣ್ಣ ನೀವು ಹಿಮಾಲಯ ಇದ್ದಂತೆ. ನಿಮಗೆ ದೀರ್ಘಾಯುಷ್ಯ ಪ್ರಾಪ್ತಿ ಇದೆ. ನಿಮ್ಮ ಹೆತ್ತವರು ಕನ್ನಡಿಗರ ಆಶೀರ್ವಾದ ಇದೆ. ನಾವು ನಿಮ್ಮನ್ನು ಪ್ರೀತಿಸುತ್ತೇವೆ ಎಂದಿದ್ದಾರೆ.
ಇನ್ನೊಂದು ಟ್ವೀಟ್ ಮಾಡಿರುವ ಜಗ್ಗೇಶ್, ಮನು ಹೆಸರು ಹೇಳದೆಯೇ ಝಾಡಿಸಿದ್ದಾರೆ. ಒಂದು ಗಾದೆ ನೆನಪಾಗುತ್ತದೆ. ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದಂಗೆ. ಗುರುಹಿರಿಯರ ಮೇಲೆ ಗೌರವ ತೋರದವನು ಗೆದ್ದ ಇತಿಹಾಸ ಇಲ್ಲ. ಇಂದು ಇದ್ದಿದ್ದು ನಾಳೆ ಇರದು. ಅಹಂಕಾರ ಬಿಡಿ ಅಂಬೆಗಾಲಿಡುತ್ತಿರುವ ಕೂಸುಗಳೇ. ಆಯುಷ್ಯ ಬರೆಯೋದು ಬ್ರಹ್ಮ, ಚಿಲ್ಲರೆ ಮನುಷ್ಯರಲ್ಲ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.