ಕನ್ನಡ ವಿವಾದದ ಬೆನ್ನಲ್ಲೇ ರಾಜ್ಯಸಭೆಯತ್ತ ಕಮಲ್‌ ಹಾಸನ್‌: ಅಭ್ಯರ್ಥಿ ಘೋಷಿಸಿದ ಮಕ್ಕಳ್ ನೀಧಿ ಮಯ್ಯಂ

Sampriya

ಬುಧವಾರ, 28 ಮೇ 2025 (15:30 IST)
Photo Courtesy X
ಚೆನ್ನೈ: ಕನ್ನಡದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಕಾಲಿವುಡ್‌ನ ಹಿರಿಯ ನಟ ಕಮಲ್‌ ಹಾಸನ್‌ ರಾಜ್ಯಸಭೆಯತ್ತ ಮುಖಮಾಡಿದ್ದಾರೆ. ಅವರು ರಾಜ್ಯಸಭಾ ಸದಸ್ಯರಾಗುವುದು ಬಹುತೇಕ ಖಚಿತವಾಗಿದೆ.

ಡಿಎಂಕೆಯ ಮಿತ್ರ ಪಕ್ಷವಾದ ಮಕ್ಕಳ್ ನೀಧಿ ಮಯ್ಯಂ(ಎಂಎನ್‌ಎಂ), ಜೂನ್ 19ರಂದು ನಡೆಯಲಿರುವ ದ್ವೈವಾರ್ಷಿಕ ರಾಜ್ಯಸಭಾ ಚುನಾವಣೆಗೆ ಪಕ್ಷದ ಸಂಸ್ಥಾಪಕ, ಅಧ್ಯಕ್ಷ ಕಮಲ್ ಹಾಸನ್ ಅವರನ್ನು ಅಭ್ಯರ್ಥಿಯಾಗಿ ಪ್ರಕಟಿಸಿದೆ.

ರಾಜ್ಯಸಭೆಯ 6 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಡಿಎಂಕೆ 4 ರಲ್ಲಿ ಸ್ಪರ್ಧಿಸಲಿದೆ. ಡಿಎಂಕೆಯಿಂದ ಮೇಲ್ಮನೆಯ ಹಾಲಿ ಸದಸ್ಯ ಹಿರಿಯ ವಕೀಲ ಪಿ ವಿಲ್ಸನ್; ಪಕ್ಷದ ಸೇಲಂ ಮೂಲದ ನಾಯಕ ಎಸ್.ಆರ್. ಶಿವಲಿಂಗಂ ಮತ್ತು ಕವಿ, ಬರಹಗಾರ ರುಕಯ್ಯ ಮಲಿಕ್ ಅಲಿಯಾಸ್ ಕವಿಗ್ನರ್ ಸಲ್ಮಾ ಅವರನ್ನು ಹೆಸರಿಸಿದೆ.  ಒಂದು ಸ್ಥಾನವನ್ನು ಮಕ್ಕಳ್ ನೀಧಿ ಮಯ್ಯಂ ಪಕ್ಷಕ್ಕೆ ಬಿಟ್ಟುಕೊಟ್ಟಿದೆ.

ಎಂಎನ್‌ಎಂನ ಆಡಳಿತ ಮಂಡಳಿ ಮತ್ತು ಆಡಳಿತ ಸಮಿತಿಯು ಸಭೆ ನಡೆಸಿ ಪಕ್ಷದ ಅಧ್ಯಕ್ಷ ಕಮಲ್ ಹಾಸನ್ ಅವರನ್ನು ಮೇಲ್ಮನೆಗೆ ತನ್ನ ಅಭ್ಯರ್ಥಿಯಾಗಿ ಹೆಸರಿಸುವ ನಿರ್ಣಯವನ್ನು ಅಂಗೀಕರಿಸಿದ್ದು, ಮಿತ್ರಪಕ್ಷಗಳಿಂದ ಔಪಚಾರಿಕವಾಗಿ ಬೆಂಬಲವನ್ನು ಕೋರಿದೆ.

2024ರ ಲೋಕಸಭಾ ಚುನಾವಣೆಗೆ ಮೊದಲು ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ನಟ-ರಾಜಕಾರಣಿ ಕಮಲ್ ಹಾಸನ್ ನೇತೃತ್ವದ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಂಡದ್ದರು. ಇಂದು ನಡೆದ ಸೀಟು ಹಂಚಿಕೆ ವೇಳೆ ಡಿಎಂಕೆ, ಒಂದು ಸ್ಥಾನವನ್ನು ಕಮಲ್ ಹಾಸನ್ ಪಕ್ಷಕ್ಕೆ ಬಿಟ್ಟುಕೊಟ್ಟಿತ್ತು. ಡಿಎಂಕೆ ಘೋಷಣೆ ಬೆನ್ನಲ್ಲೇ ಎಂಎನ್‌ಎಂ ಪಕ್ಷದ ಅಭ್ಯರ್ಥಿಯನ್ನು ಘೋಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ