ಚೆನ್ನೈ: ಸಂಗೀತ ನಿರ್ದೇಶಕ, ಗಾಯಕ ಎ.ಆರ್. ರೆಹಮಾನ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರೆಹಮಾನ್ ಅವರನ್ನು ಚೆನ್ನೈ ಗ್ರೀಮ್ಸ್ ರಸ್ತೆಯ ಅಪೋಲೊ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎದೆನೋವಿನ ಹಿನ್ನೆಲೆಯಲ್ಲಿ ಎ.ಆರ್ ರೆಹಮಾನ್ ಅವರಿಗೆ ಇಸಿಜಿ, ಎಕೋಕಾರ್ಡಿಯೋಗ್ರಾಮ್ ಸೇರಿ ವಿವಿಧ ಪರೀಕ್ಷೆಗಳನ್ನು ಮಾಡಲಾಗಿದೆ. ರೆಹಮಾನ್ ಅವರಿಗೆ ಆಂಜಿಯೋಗ್ರಾಮ್ ಮಾಡುವ ಸಾಧ್ಯತೆಯಿದೆ.
ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ 58 ವರ್ಷದ ಎ.ಆರ್ ರೆಹಮಾನ್ ಅವರು ಇತ್ತೀಚೆಗೆ ಪತ್ನಿಯಿಂದ ಡಿವೋರ್ಸ್ ಪಡೆದಿದ್ದರು. ಸುಮಾರು 29 ವರ್ಷಗಳ ದಾಂಪತ್ಯದ ನಂತರ, ಕಳೆದ ವರ್ಷ ನವೆಂಬರ್ ನಲ್ಲಿ ಸೈರಾ ಬಾನು ಮತ್ತು ಎಆರ್ ರೆಹಮಾನ್ ಬೇರ್ಪಡುವುದಾಗಿ ಪ್ರಕಟಿಸಿದ್ದರು. ಮಾಜಿ ಪತ್ನಿ ಸಾಯಿರಾ ಬಾನು ಕೂಡ ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ರೆಹಮಾನ್ ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದು, ತಾವು ವೈದ್ಯರೊಂದಿಗೆ ಮಾತನಾಡಿದ್ದು ರೆಹಮಾನ್ ಅವರು ಚೆನ್ನಾಗಿದ್ದಾರೆ, ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗುವರು ಎಂದು ತಿಳಿಸಿದ್ದಾರೆ.