ಸತ್ಯ ಘಟನೆ ಆಧಾರಿತವೆಂಬುದೂ ಸೇರಿದಂತೆ ಹಲವಾರು ಕಾರಣಗಳಿಂದ ಸುದ್ದಿಯಲ್ಲಿರುವ `ಬಳ್ಳಾರಿ ದರ್ಬಾರ್’ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಸ್ಮೈಲ್ ಶ್ರೀನು ತಮ್ಮ ಸ್ನೇಹಿತರೊಡಗೂಡಿ ನಿರ್ಮಾಣದ ಹೊಣೆಯನ್ನೂ ಹೊತ್ತುಕೊಂಡು, ನಿರ್ದೇಶನ ಮಾಡಿರುವ ಚಿತ್ರ ಬಳ್ಳಾರಿ ದರ್ಬಾರ್.
ಈ ಚಿತ್ರ ಆಂಧ್ರಪ್ರದೇಶದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. ಇನ್ನುಳಿದಂತೆ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿಯೂ ಹೆಚ್ಚಿನ ಚಿತ್ರ ಮಂದಿರಗಳಲ್ಲಿ ಬಳ್ಳಾರಿ ದರ್ಬಾರ್ ಬಿಡುಗಡೆಯಾಗುತ್ತಿದೆ. ಬಳ್ಳಾರಿಯಲ್ಲಿ ಈ ಹಿಂದೆ ನಡೆದಿದ್ದ ಅಕ್ರಮ ಗಣಿಗಾರಿಕೆಯ ವಿವರಗಳನ್ನಿಟ್ಟುಕೊಂಡು ಮಾಡಿದ್ದಾರೆಂದು ಹೇಳಲಾಗುತ್ತಿರುವ ಈ ಚಿತ್ರ ಆ ಕಾರಣದಿಂದಲೇ ಸುದ್ದಿ ಮಾಡುತ್ತಿದೆ.
ಆದರೆ ನಿರ್ದೇಶಕ ಸ್ಮೈಲ್ ಶ್ರೀನು ಅವರು ಈ ಚಿತ್ರದಲ್ಲಿ ಯಾರನ್ನೂ ಟಾರ್ಗೆಟ್ ಮಾಡಿಲ್ಲ, ಅಂಥಾ ಯಾವ ಉದ್ದೇಶವೂ ಚಿತ್ರ ತಂಡಕ್ಕಿಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ. ಬಳ್ಳಾರಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ಮತ್ತು ಅದರ ಪರಿಣಾಮಗಳು ಹಾಗೂ ಈ ವ್ಯೂಹದೊಳಗೆ ಸಿಕ್ಕ ಯುವ ಸಮುದಾಯದ ಕಥೆ ಹೇಳುತ್ತಲೇ ಸಮಾಜಕ್ಕೊಂದು ಉತ್ತಮ ಸಂದೇಶ ಕೊಡುವ ಚಿತ್ರ
ಮಾಡಿದ್ದೇವೆಂಬುದು ಚಿತ್ರ ತಂಡದ ಮಾತು.
ಇದಕ್ಕೂ ಮುಂಚೆ `ತೂಫಾನ್’ ಎಂಬ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಹೇಳಿದ್ದ ಶ್ರೀನು, ಬಳಿಕ ಹೈದರಾಬಾದ್‍ನತ್ತ ಹೊರಳಿದ್ದರು. ಅಲ್ಲಿನ ಕೆಲ ನಿರ್ದೇಶಕರ ಬಳಿ ನಿರ್ದೇಶನದ ಮತ್ತಷ್ಟು ವರಸೆಗಳನ್ನು ಕಲಿತು ಬಂದಿರುವ ಅವರೀಗ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಹಾಗೂ ನಿರ್ಮಾಣವೂ ಶ್ರೀನು ಅವರದ್ದೇ ಎಂಬುದು ವಿಶೇಷ. ಈ ಗಣಿ ಮಾಫಿಯಾದ ಸುತ್ತಲಿನ ದ್ವೇಷದ ಜೊತೆಗೇ ನವಿರಾದ ಪ್ರೀತಿ, ಚೆಂದದ ಹಾಡುಗಳೂ ಇರುವ ಈ ಚಿತ್ರ ಈ ವಾರ ತೆರೆ ಕಾಣುತ್ತಿದೆ.
ಈಗಾಗಲೇ ತೆಲುಗು ಚಿತ್ರ ರಂಗದಲ್ಲಿ ಒಂದಷ್ಟು ಹೆಸರು ಮಾಡಿರುವ ಚರಣ್ ಅರ್ಜುನ್ ಅವರ ಸಂಗೀತ ನಿರ್ದೇಶನ ಇರುವ ಈ ಚಿತ್ರಕ್ಕೆ ಕಾರ್ತಿಕ್ ಸುಬ್ರಮಣಿ ಛಾಯಾಗ್ರಹಣವಿದೆ. ಪೋಲಾ ಶ್ರೀನಿವಾಸ ಬಾಬು, ಮಮತಾ ರಾವುತ್, ಶುಭ ರಕ್ಷಾ ಮುಂತಾದವರ ತಾರಾಗಣವಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.