ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ಪೊಲೀಸರು ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ್ದ ಮೇಲ್ಮನವಿ ತೀರ್ಪು ಬರಬೇಕಿದ್ದು, ಇದಕ್ಕೆ ಮೊದಲು ಆರೋಪಿಗಳು ಕೋರ್ಟ್ ಗೆ ಜಾಮೀನು ರದ್ದುಗೊಳಿಸದೇ ಇರಲು ಲಿಖಿತ ಕಾರಣಗಳನ್ನು ಸಲ್ಲಿಸಿದ್ದಾರೆ.
ಈ ಪೈಕಿ ಎ1 ಆರೋಪಿ ಪವಿತ್ರಾ ಗೌಡ, ಎ2 ಆರೋಪಿ ದರ್ಶನ್ ತಮ್ಮ ಲಿಖಿತ ಕಾರಣಗಳನ್ನು ಕೋರ್ಟ್ ಗೆ ಸಲ್ಲಿಕೆ ಮಾಡಿದ್ದಾರೆ. ಆ ಪೈಕಿ ಪವಿತ್ರಾ ಗೌಡ ಈ ಒಬ್ಬ ವ್ಯಕ್ತಿಯನ್ನು ನೆಪ ಮಾಡಿಕೊಂಡು ಜಾಮೀನು ರದ್ದು ಮಾಡಬೇಡಿ ಎಂದು ಅಂಗಲಾಚಿದ್ದಾರೆ.
ತಮ್ಮ ಮಗಳನ್ನು ನೆಪ ಮಾಡಿ ಪವಿತ್ರಾ ಜಾಮೀನು ರದ್ದುಗೊಳಿಸಬೇಡಿ ಎಂದು ಮನವಿ ಮಾಡಿದ್ದಾರೆ. ನನಗೆ 10 ನೇ ತರಗತಿ ಓದುವ ಮಗಳಿದ್ದಾಳೆ. ಅವಳಿಗೆ ನಾನೊಬ್ಬಳೇ ಆಧಾರ. ನಾನು ಏಕಾಂಗಿ ಪೋಷಕಳಾಗಿದ್ದೇನೆ. ಜೊತೆಗೆ ನನ್ನ ವಯಸ್ಸಾದ ತಂದೆ-ತಾಯಿಯಿದ್ದು ಅವರಿಗೆ ನಾನೇ ಆಧಾರವಾಗಿದ್ದೇನೆ. ಅವರನ್ನು ನೋಡಿಕೊಳ್ಳುವ ಸಲುವಾಗಿ ಮತ್ತು ಒಬ್ಬ ಮಹಿಳೆ ಎನ್ನುವ ದೃಷ್ಟಿಯಿಂದ ಜಾಮೀನು ರದ್ದುಗೊಳಿಸಬಾರದು ಎಂದು ಪವಿತ್ರಾ ಕಾರಣ ನೀಡಿದ್ದಾರೆ.
ಇತ್ತ ದರ್ಶನ್ ಕೂಡಾ ಲಿಖಿತ ಕಾರಣಗಳನ್ನು ನೀಡಿದ್ದು, ತಮ್ಮನ್ನು ಮೈಸೂರಿನಲ್ಲಿ ವಶಕ್ಕೆ ಪಡೆದ ಬಳಿಕ ಎಫ್ಐಆರ್ ಮತ್ತು ಬಂಧನಕ್ಕೆ ಕಾರಣವನ್ನು ತಡವಾಗಿ ಸಂಜೆ ತಿಳಿಸಲಾಗಿತ್ತು. ಇದು ಕಾನೂನಿನ ಉಲ್ಲಂಘನೆಯಾಗಿದೆ. ಇನ್ನು, ಘಟನೆ ಸಂದರ್ಭ ನಾನು ಅಲ್ಲಿದ್ದೆ ಎನ್ನುವುದಕ್ಕೆ ಸೂಕ್ತ ಸಾಕ್ಷ್ಯಗಳಿಲ್ಲ. ರೇಣುಕಾಸ್ವಾಮಿಯನ್ನು ಕರೆತರಲು ಸೂಚನೆ ನೀಡಿದ್ದಕ್ಕೂ ಸಾಕ್ಷ್ಯವಿಲ್ಲ. ಹೀಗಾಗಿ ಜಾಮೀನು ರದ್ದುಗೊಳಿಸಬಾರದು ಎಂದು ಕೋರಿದ್ದಾರೆ.