ಕನ್ನಡ ಸ್ಟಾರ್ ನಟರಿಗೆ ಏನಾಗಿದೆ? ಹಿಂಗಾದ್ರೆ ಹೆಂಗೆ ಗುರೂ ಅಂತಿದ್ದಾರೆ ಫ್ಯಾನ್ಸ್

Krishnaveni K

ಗುರುವಾರ, 16 ಮೇ 2024 (12:47 IST)
ಬೆಂಗಳೂರು: ಇತ್ತೀಚೆಗೆ ನಮ್ಮ ಕನ್ನಡ ಸ್ಟಾರ್ ನಟರ ಲಾಜಿಕ್ಕೇ ಅರ್ಥವಾಗುತ್ತಿಲ್ಲ. ಮೊದಲೆಲ್ಲಾ ವರ್ಷಕ್ಕೊಂದು ಸಿನಿಮಾ ಎನ್ನುತ್ತಿದ್ದ ಸ್ಟಾರ್ ನಟರು ಈಗ ಪ್ಯಾನ್ ಇಂಡಿಯಾ ಕ್ರೇಜ್ ಬಂದರೆ ಮೇಲೆ ಮೂರು ವರ್ಷಕ್ಕೊಂದು ಸಿನಿಮಾ ಎಂಬಂತಾಗಿದೆ.

ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಟ್ಟರೆ ಸ್ಟಾರ್ ನಟರ ಸಿನಿಮಾ ಬಂದು ಎಷ್ಟೋ ದಿನಗಳೇ ಆಗಿವೆ. ಸುದೀಪ್ ನಾಯಕರಾಗಿದ್ದ ವಿಕ್ರಾಂತ್ ರೋಣ ರಿಲೀಸ್ ಆಗಿದ್ದು 2022 ರಲ್ಲಿ. ಅದಾದ ಬಳಿಕ ಇದುವರೆಗೆ ಅವರ ಹೊಸ ಸಿನಿಮಾ ಬಂದಿಲ್ಲ. ಧ್ರುವ ಸರ್ಜಾ ಮಾರ್ಟಿನ್, ಕೆಡಿ ಎಂದು ಸಿನಿಮಾ ಮಾಡುತ್ತಲೇ ಇದ್ದಾರೆ. ಇದುವರೆಗೆ ಯಾವುದೂ ರಿಲೀಸ್ ಡೇಟ್ ಅನೌನ್ಸ್ ಆಗಿಲ್ಲ. ಅವರ ಕೊನೆಯ ಸಿನಿಮಾ ಬಂದಿದ್ದು 2021 ರಲ್ಲಿ!

ಆಗಾಗ ಸದಭಿರುಚಿಯ ಸಿನಿಮಾ ಮಾಡುತ್ತಿದ್ದ ರಿಷಬ್ ಶೆಟ್ಟಿ ಕಾಂತಾರ ಸಕ್ಸಸ್ ಸಿಕ್ಕ ಮೇಲೆ ಇತರರ ಹಾದಿ ಹಿಡಿದಿದ್ದಾರೆ. ಕಾಂತಾರ ಪ್ರಿಕ್ವೇಲ್ ಪ್ರಿ ಪ್ರೊಡಕ್ಷನ್ ಕೆಲಸಗಳಿಗೆ ಒಂದು ವರ್ಷ ತೆಗೆದುಕೊಂಡ ರಿಷಬ್ ಈಗಷ್ಟೇ ಶೂಟಿಂಗ್ ಶುರು ಮಾಡಿದ್ದಾರೆ. ಇನ್ನು, ಇದು ತೆರೆಗೆ ಬರಲು ಇನ್ನೊಂದು ವರ್ಷ ಕಾಯಬೇಕಾದೀತು.

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಮೂಲಕ ಪರಭಾಷಿಕರನ್ನೂ ಕನ್ನಡ ಸಿನಿಮಾಗಳತ್ತ ತಿರುಗಿ ನೋಡುವಂತೆ ಮಾಡಿದವರು. ಆದರೆ ಕೆಜಿಎಫ್ 2 ಬಂದು ಒಂದೂವರೆ ವರ್ಷವಾದ ಬಳಿಕ ಹೊಸ ಸಿನಿಮಾ ಘೋಷಣೆ ಮಾಡಿದರು. ಅದು ಇನ್ನು ತಯಾರಾಗಬೇಕಾದರೆ ಇನ್ನೂ ಒಂದೋ-ಎರಡೋ ವರ್ಷ ತಗುಲಬಹುದು. ಅಲ್ಲಿಗೆ ಅವರೂ ಅಪರೂಪವಾಗುತ್ತಾರೆ.

ಇದರಿಂದಾಗಿಯೇ ಕನ್ನಡ ಚಿತ್ರರಂಗ ಇತ್ತೀಚೆಗೆ ದೊಡ್ಡ ಹಿಟ್ ಇಲ್ಲದೇ ಬಣಗುಡುತ್ತಿದೆ. ದರ್ಶನ್ ನಾಯಕರಾಗಿದ್ದ ಕಾಟೇರ ಸಿನಿಮಾ ಕೊನೆಯದಾಗಿ ಕನ್ನಡ ಚಿತ್ರರಂಗಕ್ಕೆ ಸಿಕ್ಕ ದೊಡ್ಡ ಹಿಟ್ ಸಿನಿಮಾ. ಅದು ರಿಲೀಸ್ ಆಗಿ ಆಗಲೇ ಆರು ತಿಂಗಳಾಗುತ್ತಾ ಬಂದಿದೆ. ಇದುವರೆಗೆ ಯಾವುದೇ ಹೊಸ ಸ್ಟಾರ್ ನಟರ ಸಿನಿಮಾಗಳು ಬಂದಿಲ್ಲ. ಎಲೆಕ್ಷನ್ ಭರಾಟೆ ನಡುವೆ ಯಾವುದೋ ಒಂದೆರಡು ಸಿನಿಮಾಗಳು ಹೀಗೆ ಬಂದು ಹಾಗೆ ಹೋಗಿವೆ. ಹೀಗಾದರೆ ಕನ್ನಡ ಚಿತ್ರರಂಗ ಗೆಲ್ಲುವುದು ಹೇಗೆ ಎಂದು ಎಂಬುದು ಸಿನಿ ಪಂಡಿತರ ಪ್ರಶ್ನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ