ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಇಂದು ಜನ್ಮದಿನದ ಸಂಭ್ರಮ. ಸುದೀಪ್ ಚಿತ್ರರಂಗದ ಅತ್ಯಂತ ಶಿಸ್ತುಬದ್ಧ ಮತ್ತು ಕ್ಲಾಸ್ ನಟ. ಅವರ ಈ ಒಂದು ಅಭ್ಯಾಸ ಎಲ್ಲರಿಗೂ ಮಾದರಿಯಾಗುತ್ತದೆ.
ಕಿಚ್ಚ ಸುದೀಪ್ ಸಿನಿಮಾ ನಟನಾಗಿ, ನಿರ್ದೇಶಕನಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಬಿಗ್ ಬಾಸ್ ನಲ್ಲಿ ಬುದ್ಧಿ ಮಾತು ಹೇಳುವ ಅಣ್ಣನಾಗಿ ಕಾಣುತ್ತಾರೆ. ನಿಜ ಜೀವನದಲ್ಲಿ ಅವರು ತಮ್ಮದೇ ಆದ ಕೆಲವು ಆದರ್ಶಗಳನ್ನು ಪಾಲಿಸಿಕೊಂಡು ಬಂದಿದ್ದಾರೆ.
ಅದರಲ್ಲಿ ಒಂದು ಎಂದರೆ ಅವರು ಯಾವತ್ತೂ ತಮ್ಮ ಸ್ನೇಹಿತರನ್ನು ಬಿಟ್ಟುಕೊಡಲ್ಲ. ಸಂದರ್ಶನವೊಂದರಲ್ಲಿ ಅವರು ಸ್ನೇಹ ಸಂಬಂಧದ ಬಗ್ಗೆ ಒಂದು ಅಮೂಲ್ಯವಾದ ಮಾತು ಹೇಳಿದ್ದರು. ಜೀವನದಲ್ಲಿ ಸ್ನೇಹ ಮತ್ತು ಸ್ನೇಹಿತರನ್ನು ತಾವು ಹೇಗೆ ಕಾಣುತ್ತೇನೆ ಎಂದು ಹೇಳಿದ್ದರು.
ಒಮ್ಮೆ ನನಗೆ ಯಾರಾದರೂ ಸ್ನೇಹಿತರು ಎಂದರೆ ಮುಗೀತು. ಅವರು ಜೀವನ ಪೂರ್ತಿ ಸ್ನೇಹಿತರೇ. ಅವರು ನನ್ನಿಂದ ದೂರವಾದರೂ ಅವರನ್ನು ಸ್ನೇಹಿತ ಎಂದೇ ಪರಿಗಣಿಸುತ್ತೇನೆ. ಅವರು ನನ್ನ ಜೊತೆಗಿಲ್ಲ ಎಂದ ಮಾತ್ರಕ್ಕೆ ಎಲ್ಲೂ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಲ್ಲ. ನಮ್ಮ ಮಧ್ಯೆ ಸರಿ ಹೋಗುತ್ತಿಲ್ಲ ಎಂದಾದರೆ ಅವರಿಂದ ದೂರವೇ ಇರುತ್ತೇನೆ. ಆದರೆ ಕೆಡುಕು ಬಯಸಲ್ಲ ಎಂದಿದ್ದರು. ಅವರ ಈ ಮಾತು ಇಂದಿನ ಪೀಳಿಗೆಗೆ ಆದರ್ಶವಾಗಿದೆ.