ಕೆಜಿಎಫ್ 2 ವಿವಾದದ ಬಗ್ಗೆ ಕೊನೆಗೂ ಖಡಕ್ ಉತ್ತರ ಕೊಟ್ಟ ಕಿಚ್ಚ ಸುದೀಪ್
ಮಂಗಳವಾರ, 26 ಏಪ್ರಿಲ್ 2022 (08:20 IST)
ಬೆಂಗಳೂರು: ಕೆಜಿಎಫ್ 2 ಬಿಡುಗಡೆಯಾದ ಸಂದರ್ಭದಲ್ಲಿ ಯಾರೋ ಕಿಡಿಕೇಡಿಗಳು ಕಿಚ್ಚ ಸುದೀಪ್ ಹಿಂದೆ ನೀಡಿದ್ದ ಹೇಳಿಕೆಯ ವಿಡಿಯೋ ಎಡಿಟ್ ಮಾಡಿ ವಿವಾದ ಸೃಷ್ಟಿಸಿದ್ದರು. ಅದಕ್ಕೀಗ ಸುದೀಪ್ ಖಡಕ್ ಉತ್ತರ ಕೊಟ್ಟಿದ್ದಾರೆ.
ಸುದೀಪ್ ಹಿಂದೊಮ್ಮೆ ಪತ್ರಕರ್ತರು ಕೆಜಿಎಫ್ ಸಿನಿಮಾ ಬಗ್ಗೆ ಹೇಳಿ ಎಂದಾಗ ನಾನು ಅದರಲ್ಲಿ ಇಲ್ಲ ಎಂದು ಹೇಳಿದ್ದನ್ನೇ ಎಡಿಟ್ ಮಾಡಿ ವಿವಾದ ಸೃಷ್ಟಿಸಿದ್ದರು.
ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಸುದೀಪ್ ನಾನು ಇಲ್ಲದೇ ಇರುವ ಪರೀಕ್ಷೆ ಬಗ್ಗೆ ಉತ್ತರ ಕೊಡುವ ಅಗತ್ಯ ನನಗಿಲ್ಲ. ಆವತ್ತು ಗೋವಾ ಫಿಲಂ ಫೆಸ್ಟಿವಲ್ ನಲ್ಲಿ ಕನ್ನಡಿಗ ಪತ್ರಕರ್ತರೊಬ್ಬರು ನನ್ನ ಬಳಿ ಬಂದು ಮಾತಾಡಿಸಿದ್ದರು. ಕರ್ನಾಟಕದವನು ಎಂಬ ಕಾರಣಕ್ಕೆ ನಾನು ಅವರನ್ನು ಮಾತನಾಡಿಸಿದ್ದೆ. ಆಗ ಅವರು ಕೆಜಿಎಫ್ ಬಗ್ಗೆ ಏನು ಹೇಳ್ತೀರಿ ಎಂದು ಕೇಳಿದರು. ಅದಕ್ಕೆ ನಾನು ಆ ಸಿನಿಮಾದಲ್ಲಿ ಇರಲಿಲ್ಲ ಎಂದೆ. ಮತ್ತೆ ಅದಕ್ಕೆ ವಿವರಣೆಯನ್ನೂ ಕೊಟ್ಟೆ. ಆವತ್ತು ನಾನು ಕನ್ನಡ ಸಿನಿಮಾದ ಪ್ರತಿನಿಧಿಯಾಗಿ ಅಲ್ಲಿಗೆ ಹೋಗಿದ್ದೆ. ಆಗ ನಾನು ನನ್ನ ಸಿನಿಮಾ ಬಗ್ಗೆಯೂ ಮಾತಾಡುವ ಸ್ಥಿತಿಯಲ್ಲಿರಲಿಲ್ಲ.
ಆದರೆ ಇದನ್ನೇ ಯಾರೋ ಕಿಡಿಗೇಡಿಗಳು ಎಡಿಟ್ ಮಾಡಿ ಕಿರಿಕ್ ಮಾಡಿದ್ರು. ನಾನು ಜೀವನದಲ್ಲಿ ಮಾಡಿದ ದೊಡ್ಡ ಸಂಪಾದನೆ ಎಂದರೆ ನನ್ನ ಜನ. ಇಂತಹ ಕಿರಿಕ್ ಗಳಿಗೆ ಅವರೇ ಉತ್ತರ ಕೊಟ್ಟರು. ಇಂತಹದ್ದಕ್ಕೆಲ್ಲಾ ತಲೆಯೇ ಕೆಡಿಸಿಕೊಳ್ಳಲ್ಲ ಎಂದು ಸುದೀಪ್ ಹೇಳಿದ್ದಾರೆ.