ನನಗೂ ಸಾಕಷ್ಟು ಹಣ ಬರಬೇಕಿದೆ, ಆದರೂ ಸುಮ್ಮನಿಲ್ಲವೇ? ವಾಣಿಜ್ಯ ಮಂಡಳಿಗೆ ಸುದೀಪ್ ಪತ್ರ

ಸೋಮವಾರ, 10 ಜುಲೈ 2023 (16:50 IST)
ಬೆಂಗಳೂರು: ತಮ್ಮ ವಿರುದ್ಧ ನಿರ್ಮಾಪಕರು ಮಾಡಿದ ಹಣಕಾಸಿನ ವಂಚನೆ ಆರೋಪಗಳಿಗೆ ಕಿಚ್ಚ ಸುದೀಪ್ ಲೀಗಲ್ ನೋಟಿಸ್ ನೀಡಿರುವುದಲ್ಲದೆ ಕರ್ನಾಟಕ ಚಲನಚಿತ್ರ  ವಾಣಿಜ್ಯ ಮಂಡಳಿಗೆ ಪತ್ರ ಬರೆದು ವಿವರಣೆ ನೀಡಿದ್ದಾರೆ.

‘ಎಂ.ಎನ್ ಕುಮಾರ್ ಗೆ ಅನುಕಂಪದ ಆಧಾರದಲ್ಲಿ ಹಲವು ಬಾರಿ ಸಹಾಯ ಮಾಡಲು ಪ್ರಯತ್ನಿಸಿದ್ದೇನೆ. ಆದರೂ ಸಾಧ್ಯವಾಗಿಲ್ಲ. ಇದಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ತಮ್ಮ ಮುಂದಿಟ್ಟಿದ್ದೇನೆ. ಅವರು ನನ್ನ ವಿರುದ್ಧ ವದಂತಿಗಳನ್ನು ಹರಡುವುದನ್ನು ಶುರು ಮಾಡಿದಾಗ ಅವರನ್ನು ಮುಖತಃ ಭೇಟಿಯಾಗುವುದನ್ನು ನಿಲ್ಲಿಸಿದೆ. ಅದಾದ ನಂತರವೂ ನನ್ನ ವಿರುದ್ಧ ಪತ್ರಿಕಾಗೋಷ್ಠಿ ಕರೆದು ಆರೋಪ ಹೊರಿಸಲಾಯಿತು. ಆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ನಾನು ಗೌರವಿಸುತ್ತೇನೆ. ಜೊತೆಗೆ ಸಂಧಾನ ಎಂಬ ಮಹತ್ತರ ಪದ ಹುಟ್ಟಿಕೊಂಡಿತು. ಸಂಧಾನ ಎಂದರೇನು? ಆ ನಿರ್ಮಾಪಕರು, ಅವರೆಲ್ಲಾ ಕಷ್ಟಗಳಿಗೆ ನನ್ನನ್ನು ಹೊಣೆಗಾರನಾಗಿಸಿ ಬಲವಂತವಾಗಿ ಹಣ ಪಡೆಯುವುದು. ನಾನು ಈ ಸುದೀರ್ಘ ವರ್ಷಗಳ ಕಾಲ ಕಾಪಾಡಿಕೊಂಡು ಬಂದ ನೈತಿಕತೆ, ಹೊಣೆಗಾರಿಕೆ,  ವ್ಯಕ್ತಿತ್ವದ ಕಾರಣಕ್ಕೆ, ಹಣ ಕೊಡಬೇಕಾಗಿಲ್ಲವೆಂಬ ನಿಲುವಿಗೆ ಬದ್ಧನಾಗಿರುವುದು.

’27 ವರ್ಷಗಳ ಕಾಲ ನಾನು ಎಂದಾದರೂ ಒಂದು ಕಪ್ಪು ಚುಕ್ಕೆ ಬೀಳುವಂತೆ ನಡೆದುಕೊಂಡಿಲ್ಲ. 80 ವರ್ಷಗಳ ಕಾಲ ಚಿತ್ರರಂಗ ನಡೆದುಕೊಂಡು ಬಂದಿರುವುದು ನಂಬಿಕೆಯೆಂಬ ಹಗ್ಗದ ಮೇಲೆ. ಆ ನಂಬಿಕೆಯೇ ನನ್ನ ವಿಶೇಷ ಪಾತ್ರಗಳನ್ನು ಹೊರತುಪಡಿಸಿ 45 ಸಿನಿಮಾಗಳಲ್ಲಿ ನನ್ನನ್ನು ನಡೆಸಿಕೊಂಡು ಬಂದಿದೆ. ನನಗೂ ಬಹುಪಾಲು ನಿರ್ಮಾಪಕರಿಂದ ಹಣ ಬರಬೇಕಿದೆ. ಎಂದಾದರೂ ಮಂಡಳಿ ಕದ ತಟ್ಟಿದ್ದೇನೆಯೇ? ಈವರೆಗೂ ನಿಮ್ಮ ಪ್ರೀತಿಯ ಸುದೀಪ ಒಳ್ಳೆಯದಕ್ಕೆ ಉದಾಹರಣೆಯಾಗಿದ್ದಾನೆಯೇ ಹೊರತು ಕೆಟ್ಟದ್ದಕ್ಕಲ್ಲ.

ಇನ್ನು ತಮ್ಮ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಒಂದು ವಿಚಾರ ನನಗೆ ನೋವು ಉಂಟು ಮಾಡಿತು. ಶ್ರೀಯುತ ನರೇಶ್ ನನಗೂ ಆತ್ಮೀಯರು. ಸುಖ-ದುಃಖ ಕೇಳುವಷ್ಟು ಆತ್ಮೀಯರು. ಆದರೆ ಅವರೇ ಪತ್ರಿಕಾಗೋಷ್ಠಿಯಲ್ಲಿ ಕುಮಾರ್ ನಾಲ್ಕೈದು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಹಾಗೇನಾದರೂ ಅವರಿಗೆ ಪ್ರಾಣಾಪಾಯವಾದರೆ ಸುದೀಪ್ ಹೊಣೆ ಎಂದಿದ್ದು. ಇದು ಇಡೀ ಸಮಾಜಕ್ಕೆ ಕೆಟ್ಟ ಸಂದೇಶ ಕೊಡುವಂತದ್ದು. ಇಂತಹ ಬೆಳವಣಿಗೆ ಕನ್ನಡ ಚಿತ್ರರಂಗದಲ್ಲಿ ಯಾವಾಗಿನಿಂದ ಆರಂಭವಾಯಿತು?

ಕುಮಾರ್ ಗೆ ಏನೇ ಅಪಾಯವಾದರೂ ನನ್ನಿಂದ ಎಂಬ ಮಹಾಪರಾಧದ ಹೇಳಿಕೆ ನೋವು ತಂದಿತು. ನಾನು ಬದುಕಿನುದ್ದಕ್ಕೂ ಇದನ್ನು ಅನುಭವಿಸಲೇ? ಇಂತಹ ಘಟನೆಗೆ ನಾನು ಸಾಕ್ಷಿ ಪ್ರಜ್ಞ ಆಗಲಾರೆ. ಅದಕ್ಕಾಗಿಯೇ ಕಾನೂನಿನ ಮೊರೆ ಹೋಗಿದ್ದೇನೆ. ಎಲ್ಲಾ ನಿರ್ಮಾಪಕರ ಮೇಲೆ ಗೌರವವಿದೆ, ನಂಬಿಕೆಯಿದೆ. ಇಲ್ಲದೆ ಇದ್ದರೆ ಇಷ್ಟು ದಿನ ಚಿತ್ರರಂಗದಲ್ಲಿ ನೆಲೆ ನಿಂತೆನೇ? ನನ್ನ ಮನೆಯಲ್ಲೂ ವೃದ್ಧ ಪೋಷಕರಿದ್ದಾರೆ. ನನಗೂ ದುಃಖ ದುಮ್ಮಾನಗಳಿವೆ. ಶೇ. 95 ರಷ್ಟು ಬ್ಯಾಂಕ್ ಲೋನ್ ಪಡೆದು ಮನೆ ಖರೀದಿಸಿದ್ದೇನೆ. ಇದೆಲ್ಲದಕ್ಕೂ ನ್ಯಾಯಾಲಯದಲ್ಲಿ ಸಾಕ್ಷಿ ನೀಡಬಲ್ಲೆ. ಯಾರೇ ತಮ್ಮಲ್ಲಿ ದೂರು ಕೊಟ್ಟರೂ ಆ ದೂರಿನ ಕುರಿತಾದ ಸಾಕ್ಷಿಗಳನ್ನು ಪರಿಶೀಲಿಸಿ. ನಮ್ಮ ಈ ಪ್ರಕರಣವನ್ನು ಇದನ್ನು ನ್ಯಾಯಾಲಯದಲ್ಲೇ ಇತ್ಯರ್ಥ ಮಾಡಲು ಬಿಡಿ. ನಾನೇನಾದರೂ ತಪ್ಪು ಮಾಡಿರುವುದು ಸಾಬೀತಾದರೆ ನ್ಯಾಯಾಲಯಕ್ಕೆ ತಲೆಬಾಗಿ ದಂಡ ಕಟ್ಟಲು ತಯಾರಾಗಿದ್ದೇನೆ’ ಎಂದು ಸುದೀರ್ಘವಾಗಿ ಸುದೀಪ್ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ