ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮೀಟೂ ಆರೋಪಗಳ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಬೇಕು ಎಂದು ಅಹಿಂಸಾ ಚೇತನ್ ನೇತೃತ್ವದಲ್ಲಿ ಸಲ್ಲಿಸಲಾಗಿರುವ ಮನವಿ ಪತ್ರದಲ್ಲಿ ನನ್ನ ಹೆಸರು ಸೇರಿಸುವ ಮೊದಲು ನನಗೆ ಕೇಳಿಯೇ ಇಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಮೀಟೂ ಆರೋಪಗಳ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಬೇಕು ಎಂದು ಕನ್ನಡ ಚಿತ್ರರಂಗದ 50 ಕ್ಕೂ ಹೆಚ್ಚು ಕಲಾವಿದರ ಸಹಿಯಿರುವ ಮನವಿ ಪತ್ರವನ್ನು ಸಿಎಂ ಸಿದ್ದರಾಮಯ್ಯಗೆ ಸಲ್ಲಿಸಲಾಗಿತ್ತು. ಈ ಮನವಿ ಪತ್ರದಲ್ಲಿ ಕಿಚ್ಚ ಸುದೀಪ್ ಹೆಸರು ಕೂಡಾ ಸೇರ್ಪಡೆ ಮಾಡಲಾಗಿತ್ತು.
ಆದರೆ ನನ್ನ ಹೆಸರು ಸೇರ್ಪಡೆಗೊಳಿಸುವ ಮೊದಲು ನನಗೆ ಕೇಳಿಯೇ ಇರಲಿಲ್ಲ ಎಂದು ಕಿಚ್ಚ ಸುದೀಪ್ ಈಗ ಹೇಳಿಕೆ ನೀಡಿದ್ದಾರೆ. ಫೈರ್ ಸಂಸ್ಥೆ ಬಗ್ಗೆ ನನಗೆ ಗೊತ್ತೇ ಇಲ್ಲ. ನನ್ನ ಹೆಸರು ಸೇರಿಸುವ ಮೊದಲು ಅವರು ನನಗೆ ಕೇಳಿಯೂ ಇಲ್ಲ ಎಂದು ಸುದೀಪ್ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.
ಪತ್ರದಲ್ಲಿ ನನ್ನ ಹೆಸರು ಉಲ್ಲೇಖಿಸುವ ಮೊದಲು ನನ್ನ ಒಂದು ಮಾತು ಕೇಳಬಹುದಿತ್ತು. ಯಾರೋ ಹೇಳಿದ ಮೇಲೆ ನನಗೆ ಗೊತ್ತಾಯಿತು. ಹಾಗಂತ ಅದನ್ನು ನಾನು ಅಗೌರವಿಸಲ್ಲ. ಆದರೆ ಸಮಸ್ಯೆಗಳು ಬಗೆಹರಿಯುವುದು ಮುಖ್ಯ. ಚಿತ್ರರಂಗದಲ್ಲಿ ಅಂತಹ ಘಟನೆಗಳ ವಿರುದ್ಧ ಧ್ವನಿಯೆತ್ತುವುದು ಮುಖ್ಯ ಎಂದು ಕಿಚ್ಚ ಹೇಳಿದ್ದಾರೆ.