ಸಾಹಸಸಿಂಹ ವಿಷ್ಣುವರ್ಧನ್ ಪುಣ್ಯಭೂಮಿ ಹೋರಾಟದ ಬಗ್ಗೆ ತಮ್ಮ ನಿಲುವು ವ್ಯಕ್ತಪಡಿಸಿದ ಕಿಚ್ಚ ಸುದೀಪ್
ಭಾನುವಾರ, 17 ಡಿಸೆಂಬರ್ 2023 (10:05 IST)
ಬೆಂಗಳೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್ ಪುಣ್ಯಭೂಮಿ ಉಳಿಸಿಕೊಳ‍್ಳುವ ವಿಚಾರದಲ್ಲಿ ವಿಷ್ಣುಸೇನಾ ಸಮಿತಿ ನಡೆಸಲಿರುವ ಬೃಹತ್ ಹೋರಾಟಕ್ಕೆ ಕಿಚ್ಚ ಸುದೀಪ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ವಿಷ್ಣು ಸೇನಾ ಸಮಿತಿ ಸಂಚಾಲಕ ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಯಲಿದೆ. ವಿಷ್ಣುವರ್ಧನ್ ಅಂತ್ಯಸಂಸ್ಕಾರ ಮಾಡಲಾಗಿರುವ ಅಭಿಮಾನ್ ಸ್ಟುಡಿಯೋದಿಂದ ಅವರ ಸಮಾಧಿ ತೆರವುಗೊಳಿಸಲು ಹುನ್ನಾರ ನಡೆದಿದೆ ಎಂದು ವಿಷ್ಣು ಅಭಿಮಾನಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.
ವಿಷ್ಣು ಸಮಾಧಿ ಬಳಿ ಅಭಿಮಾನಿಗಳಿಗೆ ಹೋಗಲೂ ಬಿಡುತ್ತಿಲ್ಲ. ಮುಂದಿನ ದಿನಗಳಲ್ಲಿ ಸಮಾಧಿಯನ್ನೇ ತೆರವುಗೊಳಿಸಲು ತಯಾರಿ ನಡೆದಿದೆ ಎಂದೂ ಆರೋಪಿಸಲಾಗಿದೆ.
ಈ ಸಂಬಂಧ ವಿಷ್ಣು ಸೇನಾ ಸಮಿತಿ ಹೋರಾಟಕ್ಕೆ ಕಿಚ್ಚ ಸುದೀಪ್ ಬೆಂಬಲ ನೀಡಿದ್ದಾರೆ. ಈ ಬಗ್ಗೆ ತಮ್ಮ ನಿಲುವು ವ್ಯಕ್ತಪಡಿಸಿರುವ ಅವರು ಡಾ. ವಿಷ್ಣು ಅಪ್ಪಾಜಿ ಸ್ಮಾರಕ ಕುರಿತು ನನ್ನದು ಅಂದು-ಇಂದು ಒಂದೇ ನಿಲುವು. ಮೈಸೂರಿನಲ್ಲಿ ಸ್ಮಾರಕವಾದರೂ ಅಂತ್ಯ ಸಂಸ್ಕಾರಗೊಂಡ ಸ್ಥಳದಲ್ಲಿಯೂ ಪುಣ್ಯಭೂಮಿಯಾಗಬೇಕು. ಈ ವಿಷಯವಾಗಿ ಅಭಿಮಾನಿಗಳ ಹೋರಾಟಕ್ಕೆ ನನ್ನ ಬೆಂಬಲವಿದೆ.ನಾನೂ ನಿಮ್ಮಲ್ಲೊಬ್ಬ ಎಂದು ಭಾವಿಸಿ ನೀವು ಮುನ್ನಡೆಯಿರಿ. ನನ್ನಿಂದಾಗುವ ಎಲ್ಲವನ್ನೂ ಪುಣ್ಯಭೂಮಿಗಾಗಿ ಮಾಡುವೆ ಎಂದಿದ್ದಾರೆ.