ಬೆಂಗಳೂರು: ಕಿಚ್ಚ ಸುದೀಪ್ ನಾಯಕರಾಗಿರುವ ಮ್ಯಾಕ್ಸ್ ಸಿನಿಮಾಗೆ ಆರ್ಥಿಕ ಸಂಕಷ್ಟ ಎದುರಾಗಿದೆಯಂತೆ. ಹೀಗೊಂದು ಸುದ್ದಿ ಆನ್ ಲೈನ್ ನಲ್ಲಿ ಹರಿದಾಡುತ್ತಿದೆ.
ಕಿಚ್ಚ ಸುದೀಪ್ ಮುಂದಿನ ಸಿನಿಮಾ ಮ್ಯಾಕ್ಸ್ ಅಪ್ ಡೇಟ್ ಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಆದರೆ ಇದುವರೆಗೆ ಮ್ಯಾಕ್ಸ್ ತಂಡದಿಂದ ಯಾವುದೇ ಅಪ್ ಡೇಟ್ ಸಿಕ್ಕಿಲ್ಲ. ಈ ನಡುವೆ ಸುದೀಪ್ ಅಭಿಮಾನಿ ಬಳಗವೇ ಸಿನಿಮಾಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಇದಕ್ಕೇ ಸಿನಿಮಾ ಬಿಡುಗಡೆ ತಡವಾಗುತ್ತಿದೆ. ಸುದೀಪ್ ಈ ಪ್ರಾಜೆಕ್ಟ್ ಕೈ ಬಿಡಲೂ ಚಿಂತನೆ ನಡೆಸಿದ್ದಾರೆ ಎಂಬಿತ್ಯಾದಿ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಇದು ಎಷ್ಟು ನಿಜ, ಎಷ್ಟು ಸುಳ್ಳು ಎಂದು ಗೊತ್ತಿಲ್ಲ. ಆದರೆ ಮ್ಯಾಕ್ಸ್ ಸಿನಿಮಾ ಬಗ್ಗೆ ಅಪ್ ಡೇಟ್ ಸಿಗದೇ ಹತಾಶೆಗೊಂಡು ಅಭಿಮಾನಿಗಳು ಈ ಸುದ್ದಿ ಹಬ್ಬಿಸಿರಬಹುದು ಎನ್ನಲಾಗಿದೆ. ಸದ್ಯಕ್ಕೆ ಚಿತ್ರತಂಡ ತಮಿಳುನಾಡಿನ ಮಹಾಬಲಿಪುರಂನಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದೆ.
ಇತ್ತೀಚೆಗೆ ಖ್ಯಾತ ಸ್ಟಂಟ್ ಮಾಸ್ಟರ್ ಕೆವಿನ್ ಕುಮಾರ್ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳಿಗೆ ಸಾಹಸ ಸನ್ನಿವೇಶ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಬಂದಿತ್ತು. ಆದರೆ ಇದರ ಹೊರತಾಗಿ ಚಿತ್ರತಂಡದಿಂದ ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿ ಹತಾಶೆಗೊಂಡ ಅಭಿಮಾನಿಗಳು ಈಗ ಆರ್ಥಿಕ ಸಂಕಷ್ಟ ಎದುರಾಗಿದೆ ಎಂಬ ಸುದ್ದಿ ಹರಡುತ್ತಿದ್ದಾರೆ.