ಬೆಂಗಳೂರು: ನಿರ್ಮಾಪಕ ಎಂಎನ್ ಸುರೇಶ್ ವಿರುದ್ಧ ಕಿಚ್ಚ ಸುದೀಪ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ರದ್ದು ಮಾಡಲು ಕೋರ್ಟ್ ನಿರಾಕರಿಸಿದೆ. ಈ ಮೂಲಕ ನಿರ್ಮಾಪಕ ಸುರೇಶ್ ಹಿನ್ನಡೆಯಾಗಿದೆ.
ಕೆಲವು ಸಮಯದ ಹಿಂದೆ ಕಿಚ್ಚ ಸುದೀಪ್ ಅಡ್ವಾನ್ಸ್ ಕೊಟ್ಟು ಸಿನಿಮಾ ಮಾಡಲಿಲ್ಲ. ನಾನು ಕೊಟ್ಟ ಹಣದಲ್ಲಿ ಮನೆ ಖರೀದಿ ಮಾಡಿದರು ಎಂಬಿತ್ಯಾದಿ ಆರೋಪಗಳನ್ನು ಸುರೇಶ್ ಪತ್ರಿಕಾಗೋಷ್ಠಿಯಲ್ಲಿ ನೀಡಿದ್ದರು. ಇದರ ಬೆನ್ನಲ್ಲೇ ಕಿಚ್ಚ ಸುದೀಪ್ ಕೋರ್ಟ್ ಮೊರೆ ಹೋಗಿದ್ದರು.
ಕ್ರೇಜಿಸ್ಟಾರ್ ರವಿಚಂದ್ರನ್ ನೇತೃತ್ವದಲ್ಲಿ ನಿರ್ಮಾಪಕರು ಮತ್ತು ಸುದೀಪ್ ನಡುವೆ ಸಂಧಾನ ನಡೆಸಲು ಪ್ರಯತ್ನ ನಡೆದಿತ್ತು. ಆದರೆ ಅದು ಫಲಗೂಡಲಿಲ್ಲ. ಈ ನಡುವೆ ಸುದೀಪ್ ತಮ್ಮ ವಿರುದ್ಧ ವಂಚನೆ ಮತ್ತು ಸುಳ್ಳು ಆಸ್ತಿ ಸಂಪಾದನೆ ಆಪಾದನೆ ಮಾಡಿದ್ದ ನಿರ್ಮಾಪಕರ ವಿರುದ್ಧ ಮಾನನಷ್ಟ ಮೊಕದ್ದಮೆ ಸಲ್ಲಿಸಿದ್ದರು.
ಇದರ ನಡುವೆ ಸುರೇಶ್ ತಮ್ಮ ವಿರುದ್ಧ ಸಲ್ಲಿಸಲಾಗಿರುವ ಅರ್ಜಿ ರದ್ದು ಮಾಡುವಂತೆ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಆದರೆ ವಿಚಾರಣೆ ನಡೆಸಿದ ಕೋರ್ಟ್ ಮೊಕದ್ದಮೆ ಹೂಡಿದ ವಿಧಾನದಲ್ಲಿ ಯಾವುದೇ ಲೋಪಗಳಾಗಿಲ್ಲ. ಹೀಗಾಗಿ ಪ್ರಕರಣ ರದ್ದು ಮಾಡಲಾಗದು ಎಂದಿದೆ.