ಸಂಕ್ರಾಂತಿಯು ಎಲ್ಲರಿಗೂ ಸಮೃದ್ಧಿ, ಸಂತೋಷ ತರಲಿ: ಜೈಲು ಶಿಕ್ಷೆಯ ಬಳಿಕ ದರ್ಶನ್‌ ಮೊದಲ ಪ್ರತಿಕ್ರಿಯೆ

Sampriya

ಮಂಗಳವಾರ, 14 ಜನವರಿ 2025 (20:00 IST)
Photo Courtesy X
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್‌ ದರ್ಶನ್ ಅವರು ಜೈಲು ಶಿಕ್ಷೆ ಅನುಭವಿಸಿದ ಬಳಿಕ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡು ಸಂಕ್ರಾಂತಿ ಶುಭಾಶಯ ಕೋರಿದ್ದಾರೆ.

ಮೈಸೂರಿನಲ್ಲಿ ತೋಟದ ಮನೆಯಲ್ಲಿ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಜೊತೆಗೆ ಸಂಕ್ರಾಂತಿ ಆಚರಿಸಿದ್ದಾರೆ. ತಮ್ಮ ಪ್ರೀತಿಯ ಕುದುರೆಯನ್ನು ಹಿಡಿದುಕೊಂಡಿರುವ ಫೋಟೋವನ್ನು ದರ್ಶನ್‌ ಅಪ್ಲೋಡ್ ಮಾಡಿದ್ದಾರೆ.

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ನಿಮ್ಮ ಜೀವನದಲ್ಲಿ ಸಂತೋಷವೆಂಬ ಗಾಳಿಪಟಗಳು ಎತ್ತರಕ್ಕೆ ಹಾರಲಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ಎಳ್ಳು ಬೆಲ್ಲ ಹಂಚಿ ಹೊಸ ಭರವಸೆಯೊಂದಿಗೆ ಮಕರ ಸಂಕ್ರಾಂತಿಯನ್ನು ಬರಮಾಡಿಕೊಳ್ಳೋಣ ಎಂದು ಬರೆದುಕೊಂಡಿದ್ದಾರೆ.

ದರ್ಶನ್‌, ಪವಿತ್ರಾ ಗೌಡ ಸೇರಿದಂತೆ 7 ಮಂದಿಗೆ ಕರ್ನಾಟಕ ಹೈಕೋರ್ಟ್‌ ಡಿ. 13 ರಂದು ಜಾಮೀನು ಮಂಜೂರು ಮಾಡಿತ್ತು. ಆದೇಶದಲ್ಲಿ ಏಳು ಆರೋಪಿಗಳಿಗೆ, ಕೋರ್ಟ್ ಅನುಮತಿ ಇಲ್ಲದೇ ಬೆಂಗಳೂರು ಬಿಟ್ಟು ಹೋಗುವಂತಿಲ್ಲ. ಪ್ರತಿ ತಿಂಗಳು ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿತ್ತು.

 ಜ.10 ರಂದು 57ನೇ ಸಿಸಿಹೆಚ್‌ ನ್ಯಾಯಾಲಯಕ್ಕೆ ದರ್ಶನ್‌ ಸೇರಿದಂತೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎಲ್ಲಾ ಆರೋಪಿಗಳು ಹಾಜರಾಗಿದ್ದರು. ವಿಚಾರಣೆ ಮುಂದೆ ದರ್ಶನ್‌ ಪರ ವಕೀಲರು ಮೈಸೂರಿಗೆ ತೆರಳಲು ಅನುಮತಿ ನೀಡಬೇಕೆಂದು ಕೇಳಿದ್ದರು. ಅರ್ಜಿಯನ್ನು ಮಾನ್ಯ ಮಾಡಿದ್ದ ಕೋರ್ಟ್‌ ದರ್ಶನ್‌ಗೆ ಜ.12ರಿಂದ 17ರವರೆಗೆ ಮೈಸೂರಿನಲ್ಲಿ ತಂಗಲು ಅನುಮತಿ ನೀಡಿತ್ತು.  ಹೀಗಾಗಿ ಈ ಬಾರಿ ಸಂಕ್ರಾಂತಿಯನ್ನು ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ದರ್ಶನ್‌ ಕುಟುಂಬದೊಂದಿಗೆ ಆಚರಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ