ನನ್ನಪ್ರಕಾರ ಚಿತ್ರ ಈಗ ಸೃಷ್ಟಿ ಮಾಡಿರೋ ಅಲೆ ಗಮನಿಸಿದ ಯಾರೇ ಆದರೂ ಇದೂ ನಿರ್ದೇಶಕ ವಿನಯ್ ಬಾಲಾಜಿಯವರ ಮೊದಲ ಚಿತ್ರವೆಂದರೆ ನಂಬಲು ತುಸು ಕಷ್ಟವಾಗಬಹುದೇನೋ. ಆದರೆ ಅದೆಷ್ಟೋ ವರ್ಷಗಳ ನಿರಂತರ ಪರಿಶ್ರಮ, ತಯಾರಿಯ ಫಲವಾಗಿ ವಿನಯ್ ಮೊದಲ ಪ್ರಯತ್ನದಲ್ಲಿಯೇ ಹೊಸತನದ ಚುಂಗುಹಿಡಿದು ಭರವಸೆಯ ಹೆಜ್ಜೆಯಿಟ್ಟಿದ್ದಾರೆ. ಇದಕ್ಕೆ ಭರ್ಜರಿ ಗೆಲುವೊಂದು ಜೊತೆಯಾಗೋ ಲಕ್ಷಣಗಳೇ ಢಾಳಾಗಿವೆ.
ತಾನು ಏನಾದರೂ ಮಾಡಿದರೆ ಅದು ಚಿತ್ರರಂಗದಲ್ಲಿ ಮಾತ್ರವೆಂಬ ತೀರ್ಮಾನ ಮಾಡಿ ಕೂತ ವಿನಯ್ ಹಲವಾರು ವರ್ಷಗಳ ಕಾಲ ಸಿನಿಮಾರಂಗದಲ್ಲಿ ಸೈಕಲ್ಲು ಹೊಡೆದಿದ್ದಾರೆ. ಅಂಥಾ ಅನುಭವಗಳನ್ನು ಜೊತೆಗಿಟ್ಟುಕೊಂಡೇ ಅವರು ನನ್ನಪ್ರಕಾರ ಚಿತ್ರವನ್ನು ಹೊಸತನ, ಪ್ರಯೋಗಗಳೊಂದಿಗೆ ಕಟ್ಟಿಕೊಟ್ಟಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರೋ ಪೋಸ್ಟರ್, ಮೋಷನ್ ಪೋಸ್ಟರ್, ಟ್ರೇಲರ್ ಮತ್ತು ಹಾಡುಗಳು ವಿನಯ್ ಮೊದಲ ಹೆಜ್ಜೆಯಲ್ಲಿಯೇ ಗೆಲುವು ದಾಖಲಿಸುತ್ತಾರೆಂಬುದಕ್ಕೆ ಸಾಕ್ಷಿ ಒದಗಿಸುವಂತಿವೆ. ಸ್ಕ್ರೀನ್ ಪ್ಲೇ ಸೇರಿದಂತೆ ಪ್ರತೀ ಹಂತದಲ್ಲಿಯೂ ವಿನಯ್ ಈ ಚಿತ್ರವನ್ನು ಹೊಸತನದೊಂದಿಗೇ ರೂಪಿಸಿದ್ದಾರಂತೆ.
ಈ ಸ್ಕ್ರೀನ್ ಪ್ಲೇ ಕರಾಮತ್ತಿಗೆ ಸೆನ್ಸಾರ್ ಮಂಡಳಿ ಅಧಿಕಾರಿಗಳೂ ಮೆಚ್ಚುಗೆ ಸೂಚಿಸಿದ್ದಾರೆ. ಒಟ್ಟಾರೆಯಾಗಿ ಆರಂಭಿಕ ಪ್ರಯತ್ನದಲ್ಲಿಯೇ ಪ್ರತಿಭಾವಂತ ನಿರ್ದೇಶಕರಾಗಿ ಗುರುತಿಸಿಕೊಳ್ಳುವ, ಮಹಾ ಗೆಲುವೊಂದನ್ನು ಪಡೆಯುವ ಲಕ್ಷಣಗಳನ್ನು ಕಂಡು ವಿನಯ್ ಖುಷಿಗೊಂಡಿದ್ದಾರೆ.