ಶಿವರಾಜ್ ನಿರ್ದೇಶನದ ಚೊಚ್ಚಲ ಚಿತ್ರ ಉಡುಂಬಾ ಈ ವಾರ ತೆರೆಗಾಣುತ್ತಿದೆ. ಇದೊಂದು ಪಕ್ಕಾ ಮಾಸ್ ಸಿನಿಮಾ ಎಂಬ ವಿಚಾರವೂ ಕೂಡಾ ಈಗಾಗಲೇ ಪ್ರೇಕ್ಷಕರಿಗೆ ಸ್ಪಷ್ಟವಾಗಿದೆ. ಟ್ರೇಲರ್ನಲ್ಲಿ ಕಾಣಿಸಿಕೊಂಡಿರೋ ದೃಷ್ಯಾವಳಿಗಳಂತೂ ಅದನ್ನು ಸಾಕ್ಷೀಕರಿಸುವಂತಿವೆ. ಆದರೆ ಪ್ರತಿಯೊಬ್ಬರನ್ನೂ, ಪ್ರತೀ ವರ್ಗದ ಪ್ರೇಕ್ಷಕರನ್ನೂ ಮುದಗೊಳಿಸುವ ಅಂಶಗಳನ್ನು ಬಚ್ಚಿಟ್ಟುಕೊಂಡೇ ಈ ಚಿತ್ರ ನಿಮ್ಮನ್ನು ಎದುರಾಗಲಿದೆ. ಪ್ರತೀ ವರ್ಗದ ಪ್ರೇಕ್ಷಕರಿಗೂ ಫೇವರಿಟ್ ಅನ್ನಿಸೋವಂಥಾ ಕಂಟೆಂಟುಗಳೊಂದಿಗೇ ಈ ಸಿನಿಮಾ ಮೂಡಿ ಬಂದಿದೆ.
ಶಿವರಾಜ್ ನಿರ್ದೇಶನ ಮಾಡಿರೋ ಉಡುಂಬಾ ಚಿತ್ರದಲ್ಲಿ ಆಕ್ಷನ್ ಸನ್ನಿವೇಶಗಳೇ ಪ್ರಧಾನವಾದರೂ ಅದರ ಸುತ್ತಾ ಬೇರೆ ಛಾಯೆಯ ಕಥಾ ಗುಚ್ಛ ಹಬ್ಬಿಕೊಂಡಿದೆ. ಇಲ್ಲಿ ಪವನ್ ಶೌರ್ಯ ಮೀನುಗಾರರ ಹುಡುಗನಾಗಿ, ಅದೇ ಊರಲ್ಲಿನ ಹುಡುಗಿಯೊಂದಿಗೆ ಗಾಢವಾಗಿ ಪ್ರೀತಿಯಲ್ಲಿ ಬಿದ್ದ ಪ್ರೇಮಿಯಾಗಿ ಕಾಣಿಸಿಕೊಂಡಿದ್ದಾರೆ. ಹೀಗೆ ಸಾಮಾನ್ಯ ಹುಡುಗ ಪ್ರೇಮದ ನಶೆಯಿಂದ, ಪ್ರತೀಕಾರದ ಕಿಚ್ಚಿಟ್ಟುಕೊಂಡು ಅಬ್ಬರಿಸುವಾಗಲೂ ಆತನ ಎದೆಯೊಳಗೆ ನಿಗಿನಿಗಿಸೋ ಪ್ರೀತಿ ಪ್ರೇಕ್ಷಕರನ್ನು ಸದಾ ಕಾಡುವಂತೆ ಮೂಡಿ ಬಂದಿದೆಯಂತೆ. ಇಚಿಥಾ ಭಾವತೀವ್ರತೆ ಮತ್ತು ಆಕ್ಷನ್ ಸನ್ನಿವೇಶಗಳೇ ಈ ಸಿನಿಮಾದ ಪ್ರಧಾನ ಅಂಶ.
ಪ್ರೀತಿ ಮತ್ತು ಆಕ್ಷನ್ ಸನ್ನಿವೇಶಗಳು ಮಿಳಿತಗೊಂಡಿರೋ ಚಿತ್ರಗಳು ಕನ್ನಡದಲ್ಲಿ ಸಾಕಷ್ಟು ಬಂದಿವೆ. ಆದರೆ ಅಪರೂಪದಲ್ಲಿಯೇ ಅಪರೂಪದ ಕಥೆಯೊಂದನ್ನು ಉಡುಂಬಾ ಚಿತ್ರ ಒಳಗೊಂಡಿದೆ. ಕಡಲ ತಡಿಯ ಸುಂದರ ವಾತಾವರಣದಲ್ಲಿ ತೆರೆದುಕೊಂಡು, ಅಲ್ಲಿನ ನಿಗೂಢಗಳ ಜೊತೆಗೇ ಸಾಗುವ ಈ ಕಥೆ ಯಾರ ಕಲ್ಪನೆಗೂ ಅಷ್ಟು ಸಲೀಸಾಗಿ ಸಿಕ್ಕುವಂಥಾದ್ದಲ್ಲ ಎಂಬ ವಿಚಾರ ಈಗಾಗಲೇ ಪ್ರೇಕ್ಷಕರಿಗೆಲ್ಲ ಗೊತ್ತಾಗಿದೆ. ಉಡುಂಬಾನ ಈವರೆಗಿನ ಹವಾ ನೋಡಿದರೆ ಇದು ಈ ವರ್ಷದ ಭರ್ಜರಿ ಹಿಟ್ ಚಿತ್ರವಾಗಿ ದಾಖಲಾಗೋ ಲಕ್ಷಣಗಳೇ ದಟ್ಟವಾಗಿವೆ. ಚಿತ್ರತಂಡ ಖುಷಿಗೊಳ್ಳಲು ಇದಕ್ಕಿಂತಲೂ ಬೇರೇನು ಬೇಕು?