ಹೊಸ ನಿರೀಕ್ಷಿತ ಸಂಗೀತ ಆಲ್ಬಮ್ "ಟಕೀಲ ಸೂಪರ್‌ಹಿಟ್

ರಾಮಕೃಷ್ಣ ಪುರಾಣಿಕ

ಮಂಗಳವಾರ, 19 ಡಿಸೆಂಬರ್ 2017 (14:06 IST)
ಕನ್ನಡದಲ್ಲಿ ರ್‍ಯಾಪ್ ಹಾಡುಗಳನ್ನು ರಚಿಸುವ ಮೂಲಕ ಕನ್ನಡಿಗರ ಮನೆಮಾತಾದ ಕನ್ನಡ ರ್‍ಯಾಪರ್ ಚಂದನ್ ಶೆಟ್ಟಿ (ಸಿಎಸ್) ಅವರ ಹೊಸ ನಿರೀಕ್ಷಿತ ಸಂಗೀತ ಆಲ್ಬಮ್ "ಟಕೀಲ" ಹಾಡನ್ನು ಬಿಗ್ ಬಾಸ್ ವೇದಿಕೆಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಉಪಸ್ಥಿತಿಯಲ್ಲಿ ಚಂದನ್ ಶೆಟ್ಟಿ ಅವರ ಸ್ನೇಹಿತರು ಬಿಡುಗಡೆ ಮಾಡಿದ್ದಾರೆ.

ಬಿಡುಗಡೆ ಮಾಡಿದ ಕೆಲವೇ ಘಂಟೆಗಳಲ್ಲಿಯೇ ಹೆಚ್ಚಿನ ವೀಕ್ಷಣೆಗಳನ್ನು ಪಡೆದಿದೆ. ಕನ್ನಡ ಸಂಗೀತ ಪ್ರೇಮಿಗಳು ಟಕೀಲ ಶಾಟ್ಸ್‌ಗಳಂತೆ ಈ ಹಾಡಿನ ನಶೆಯನ್ನು ಏರಿಸಿಕೊಂಡಿದ್ದಾರೆ.
 
ಕನ್ನಡದಲ್ಲಿ ಹಾಡುಗಳನ್ನು ರ್‍ಯಾಪ್ ಮಾಡುವ ಮೂಲಕ "ಹಾಳಾಗೋದೆ, 3 ಪೆಗ್, ಚಾಕೊಲೇಟ್ ಗರ್ಲ್" ಹಾಡುಗಳನ್ನು ನೀಡಿದ ಚಂದನ್ ಶೆಟ್ಟಿ ಅವರ ಹೊಸ ಹಾಡು ಭಾನುವಾರ ಕಲರ್ಸ್ ಸೂಪರ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ವೇದಿಕೆಯಲ್ಲಿ ಟೀಸರ್ ಮೂಲಕ ಬಿಡುಗಡೆಯಾಗಿದೆ. ಚಂದನ್ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿರುವುದರಿಂದ ಈ ವೇದಿಕೆಯಲ್ಲಿ ಅವರ ಈ ಹೊಸ ಹಾಡನ್ನು ಕಿಚ್ಚ ಸುದೀಪ್ ಅವರ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಚಂದನ್ ಶೆಟ್ಟಿಯವರು ಬಿಗ್ ಬಾಸ್ ಮನೆಯಿಂದಲೇ ತಮ್ಮ ಹಾಡಿನ ಕುರಿತು ಮಾತನಾಡಿದ್ದಾರೆ.
 
ಸಿಎಸ್ ರೆಕಾರ್ಡ್ಸ್ ಪ್ರಸ್ತುತ ಪಡಿಸಿದ, ರಾಜ್ ಕ್ರಿಯೇಷನ್ಸ್‌ನಿಂದ ನಿರ್ಮಾಣವಾದ ಈ ಹಾಡಿಗೆ ರಾಜು ಭಾಗ್ಯಶ್ರೀ ಹಣ ಹಾಕಿದ್ದಾರೆ, ಸಚಿನ್ ಬಾಗ್ಲಿ ಸಂಗೀತ ಹಾಗೂ ಮಿಕ್ಸಿಂಗ್ ಮಾಡಿದ್ದಾರೆ, ಸಹ ನಿರ್ದೇಶಕರಾಗಿ ಪುನೀತ್ ಶೆಟ್ಟಿ ಕೆಲಸ ಮಾಡಿದ್ದಾರೆ ಮತ್ತು ಸಾಹಿತ್ಯ, ಹಿನ್ನೆಲೆ ಧ್ವನಿ, ನಿರ್ದೇಶನ, ಸಂಯೋಜನೆ ಚಂದನ್ ಶೆಟ್ಟಿಯವರದ್ದಾಗಿದೆ. 2017 ರ ಮಿಸ್ ಕರ್ನಾಟಕ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ಶಾಲಿನಿ ಗೌಡ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಚಂದನ್ ಶೆಟ್ಟಿ ಹಾಗೂ ಅವರ ಸ್ನೇಹಿತರ ಶ್ರಮದ ಪ್ರತಿಫಲವಾಗಿ ಬಿಡುಗಡೆಗೊಂಡ 40 ಗಂಟೆಗಳಲ್ಲಿ 2 ಮಿಲಿಯನ್ (20 ಲಕ್ಷ) ವೀಕ್ಷಣೆಗಳನ್ನು ಪಡೆದುಕೊಂಡಿದೆ.
 
ಸುಮಾರು 50 ಕ್ಕಿಂತ ಹೆಚ್ಚಿನ ಸಿನೆಮಾಗಳಲ್ಲಿ ಸಾಹಿತ್ಯ, ಹಿನ್ನೆಲೆ ಗಾಯನ ಹಾಗೂ ಸಹಾಯಕ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ ಚಂದನ್ ಶೆಟ್ಟಿ. ಇತ್ತೀಚಿಗೆ ಪವರ್ ಪ್ಯಾಕ್ ಹಾಡುಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ ಕನ್ನಡದ ರ್‍ಯಾಪರ್ ಚಂದನ್ ಶೆಟ್ಟಿ.
 
ಕಳೆದ ವರ್ಷ ಕರ್ನಾಟಕದ ಸಂಗೀತ ಪ್ರಿಯರನ್ನು ಅಮಲಿನಲ್ಲಿ ತೇಲಿಸಿದ್ದ "3 ಪೆಗ್" ಹಾಡಿಗಿಂತ ಈಗಿನ "ಟಕೀಲ" ಅದಕ್ಕಿಂತ ಹೆಚ್ಚಿನ ಮತ್ತೆರಿಸಲಿ ಎನ್ನುವುದೇ ಸಿಎಸ್ ಅಭಿಮಾನಿಗಳ ಆಶಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ