ಚೆನ್ನೈ: 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಗುರಿ ಹೊಂದಿರುವ ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' ಪಕ್ಷದ ಮೊದಲ ಸಮಾವೇಶ ವಿಲ್ಲುಪುರಂ ಬಳಿಯ ವಿಕ್ರವಂಡಿಯಲ್ಲಿ ನಡೆಯಲಿದೆ. ತಮಿಳುನಾಡಿನಾದ್ಯಂತ ಮತ್ತು ನೆರೆಯ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರಿದಂತೆ ಸುಮಾರು 5 ಲಕ್ಷ ಜನರು ಸೇರುವ ನಿರೀಕ್ಷೆಯಿದೆ.
ಪಕ್ಷದ ಅಧ್ಯಕ್ಷ ವಿಜಯ್ ಅವರು ಇಂದು ಪಕ್ಷದ ತತ್ವಗಳು ಮತ್ತು ಸೈದ್ಧಾಂತಿಕ ದೃಷ್ಟಿಕೋನವನ್ನು ಇಂದು ಘೋಷಿಸಲಿದ್ದು, ಹೀಗಾಗಿ ತಮಿಳುನಾಡಿನಲ್ಲಿ ಕಾರ್ಯಕ್ರಮ ಬಗ್ಗೆ ಭಾರೀ ನಿರೀಕ್ಷೆಯಿದೆ. ಪಕ್ಷದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಸಾರ್ವಜನಿಕಗೊಳಿಸಲು ಸಮ್ಮೇಳನವು ಸೂಕ್ತ ವೇದಿಕೆಯಾಗಿದೆ ಎಂದು ಅವರೇ ಈ ಹಿಂದೆ ಹೇಳಿಕೊಂಡಿದ್ದರು.
ವಿಚಾರವಾದಿ ದ್ರಾವಿಡ ಧೀಮಂತ 'ಪೆರಿಯಾರ್' ಇವಿ ರಾಮಸಾಮಿಯಿಂದ ಹಿಡಿದು ಡಾ ಬಿಆರ್ ಅಂಬೇಡ್ಕರ್ ಮತ್ತು ಕಾಂಗ್ರೆಸ್ ಹಿರಿಯ ಕೆ ಕಾಮರಾಜ್, ಹಿಂದಿನ ತಮಿಳು ರಾಜರು - ಚೇರ, ಚೋಳ ಮತ್ತು ಪಾಂಡ್ಯ - ಹಾಗೂ ಧೀರ ರಾಣಿ ವೇಲು ನಾಚಿಯಾರ್ ವರೆಗೆ ರಾಜಕೀಯ ದಿಗ್ಗಜರ ಬೃಹತ್ ಕಟೌಟ್ ಗಳಿಂದ ಸ್ಥಳವನ್ನು ಅಲಂಕರಿಸಲಾಗಿದೆ. ವಿಜಯ್ ಅವರ ಕಟೌಟ್ ಟಿವಿಕೆಗಳ ರಾಜಕೀಯ ದೃಷ್ಟಿಕೋನದ ಸೂಚನೆಯನ್ನು ನೀಡುವಂತೆ ಇವೆ.
ತಮಿಳು ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದ ಮಾಸ್ ಹೀರೋ, ವಿಜಯ್ ವಿಧಾನಸಭಾ ಚುನಾವಣೆಯಲ್ಲಿ ಎರಡು ಪ್ರಬಲ ದ್ರಾವಿಡ ಪಕ್ಷಗಳಾದ ಆಡಳಿತಾರೂಢ ಡಿಎಂಕೆ ಮತ್ತು ಪ್ರತಿಪಕ್ಷ ಎಐಎಡಿಎಂಕೆಯನ್ನು ಎದುರಿಸುವ ಉದ್ದೇಶವನ್ನು ತಿಳಿಸಿದ್ದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅವರು ಯಾವುದೇ ಪಕ್ಷವನ್ನು ಬೆಂಬಲಿಸಿರಲಿಲ್ಲ.
ಈಗಾಗಲೇ ರಾಷ್ಟ್ರೀಯ ಹೆದ್ದಾರಿ 45ಕ್ಕೆ ಹೊಂದಿಕೊಂಡಿರುವ ಇಂದಿನ ಸಮಾವೇಶ ಸ್ಥಳದಲ್ಲಿ ಅಭಿಮಾನಿಗಳು, ಯುವಕರು ಸೇರುತ್ತಿದ್ದಾರೆ.