ಲವ್, ಕಾಮಿಡಿ ಹಾಗೂ ಥ್ರಿಲ್ಲರ್ ಸಸ್ಪೆನ್ಸ್ ಕಥಾನಕ ಹೊಂದಿದ ಚಲನಚಿತ್ರ “ಡಮ್ಕಿ ಡಮಾರ್” ಹೊಸ ವರ್ಷದ ಆರಂಭದಲ್ಲಿ ಚಿತ್ರ ಮಂದಿರಗಳಿಗೆ ಲಗ್ಗೆ ಇಡಲು ಸಿದ್ದವಾಗಿದೆ. ಜಗ್ಗೇಶ್ ಅಭಿನಯದ ವೀರಣ್ಣ, ಮನೆಮನೆ ರಾಮಾಯಣ, ಸಿಂಧು, ಬೆಳದಿಂಗಳ ರಾತ್ರಿ ಮೊದಲಾದ ಚಲನಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಸದ್ಗುಣ ಮೂರ್ತಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಅರ್ಜುನ್ ಜನ್ಯ, ಶ್ರೀಧರ್ ಪಿ ಸಂಭ್ರಮ್, ಮನೋಮೂರ್ತಿ ಸೇರಿದಂತೆ ಹಲವಾರು ಸಂಗೀತ ನಿರ್ದೇಶಕರ ಜೊತೆ ಕೀಬೋರ್ಡ್ ಪ್ಲೇಯರ್ ಆಗಿಯೂ ಕಾರ್ಯನಿರ್ವಹಿಸಿರುವ ಸದ್ಗುಣ ಮೂರ್ತಿ ಅವರ ಪುತ್ರ ಪ್ರದೀಪ್ ವರ್ಮ ಈ ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗವನ್ನು ಪ್ರವೇಶಿಸುತ್ತಿದ್ದಾರೆ.
ಈಗಾಗಲೇ 85ಕ್ಕೂ ಹೆಚ್ಚು ಚಿತ್ರಗಳಿಗೆ ರೀ ರೆಕಾರ್ಡಿಂಗ್ ಮಾಡಿರುವ ಇವರು ಚಿತ್ರರಂಗದಲ್ಲಿ ಒಬ್ಬ ಕಲಾವಿದನಾಗಿಯೂ ಬೆಳೆಯಬೇಕೆಂಬ ಹಂಬಲದಿಂದ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು ಹಾಗೂ ತಮಿಳುನಾಡಿನ ಚೆನೈನಲ್ಲಿ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರಕ್ಕೆ ಯು ಸರ್ಟಿಫಿಕೆಟ್ ಸಿಕ್ಕಿದ್ದು, ಇಡೀ ಚಿತ್ರ ಒಂದು ಟ್ರಾವೆಲ್ ಕಥಾನಕವನ್ನು ಹೊಂದಿದೆ.
ಶ್ರೀ ಭೂಮಿಕ ಪ್ರೊಡಕ್ಷನ್ಸ್ ಸಂಸ್ಥೆಯಲ್ಲಿ ಶ್ರೀನಿವಾಸ ಕಥೆ, ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವೇಲ್ಸ್ ಛಾಯಾಗ್ರಹಣ, ಎಸ್. ಪ್ರದೀಪ್ ವರ್ಮಾ ಸಂಗೀತ, ಸಾಯಿ ಸರ್ವೇಶ ಸಾಹಿತ್ಯ, ಕುಮಾರ ಕೋಟೆ ಕೊಪ್ಪ, ಸಂಕಲನ, ಇಂದ್ರಜಿತ್ ಸಹನಿರ್ಮಾಪಕರಾಗಿದ್ದು, ಪ್ರದೀಪ್ ವರ್ಮ, ಚೈತ್ರ ಶೆಟ್ಟಿ, ಜಗದೀಶ್ ವೆಂಕಿ, ಅನುಷ್ಕಾ ಶೆಟ್ಟಿ, ರಾಜೇಶ, ಶಿವಾನಂದ, ಸುನೀಲ್‍ಕುಮಾರ್, ರವಿರಾಜ್, ಅಂಬಿಕಾ, ಮಣಿ, ಶೋಭಿತಾ, ಇನ್ನು ಮುಂತಾದವರ ತಾರಾಬಳಗವಿದೆ.