ರಾಜ್ ಕುಮಾರ್, ಶಿವಣ್ಣ, ಪುನೀತ್ ಲಕ್ಕಿ@42..!

ಗುರುವಾರ, 6 ಏಪ್ರಿಲ್ 2017 (10:54 IST)
ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಸಿನಿಮಾ ಅಭೂತಪೂರ್ವ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ. ಚಿತ್ರದಲ್ಲಿ ಪುನೀತ್ ಪಾತ್ರ ಮತ್ತು ಅಭಿನಯ ಅಣ್ಣಾವ್ರ ಕಸ್ತೂರಿ ನಿವಾಸವನ್ನ ನೆನಪಿಸುತ್ತಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು. ರಾಜಕುಮಾರ ಸಿನಿಮಾ ನೋಡಿ ಶಿವಣ್ಣ ಸಹ ಭಾವುಕರಾಗಿ ಕಣ್ಣೀರು ಹಾಕಿದ್ದರು.

ಪುನೀತ್ ಸಿನಿಮಾ ಯಶಸ್ಸು ಕಾಣುತ್ತಿದ್ದಂತೆ ರಾಜ್ ಕುಮಾರ್, ಶಿವಣ್ನ ಮತ್ತು ಪುನೀತ್ ನಡುವೆ ಕೆಲ ಸಾಮ್ಯತೆಗಳು ಅಭಿಮಾನಿಗಳ ಮನದಲ್ಲಿ ಮೂಡಿವೆ. 42ನೇ ವಯಸ್ಸಿಗೆ ಕಾಲಿಟ್ಟಾಗ ಈ ಮೂವರೂ ಕನ್ಡಡದ ಕಣ್ಮಣಿಗಳು ಜನಮೆಚ್ಚುವ ತಮ್ಮ ವೃತ್ತಿ ಜೀವನದ ಮೈಲಿಗಲ್ಲಾಗುವಂತಹ ಚಿತ್ರಗಳನ್ನ ಕೊಟ್ಟಿದ್ದಾರೆ.

ಕಸ್ತೂರಿ ನಿವಾಸ ರಿಲೀಸ್ ಆದಾಗ ಅಣ್ಣಾವ್ರಿಗೆ 42 ವರ್ಷ: 1971ರಲ್ಲಿ ಕಸ್ತೂರಿ ನಿವಾಸ ಚಿತ್ರ ರಿಲೀಸ್ ಆದಾಗ ಅಣ್ಣಾವ್ರಿಗೆ 42 ವರ್ಷ. ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಮಾಡಿತು. ಅಣ್ಣಾವ್ರ ಅಭಿಮಾನಿಗಳ್ಯಾರೂ ಕಸ್ತೂರಿ ನಿವಾಸವನ್ನ ಎಂದೆಂದಿಗೂ ಮರೆಯುವುದಿಲ್ಲ. ಬಾಕ್ಸ್ ಆಫೀಸ್`ನಲ್ಲಿ ಒಳ್ಳೆಯ ಗಳಿಕೆ ಮಾಡಿತ್ತು. ಸಮಾಜಕ್ಕೆ ನೆರವಿನ ಸಂದೇಶ ಸಾರಿದ್ದ  ಈ ಚಿತ್ರ ಜನರಿಗೆ ಹತ್ತಿರವಾಗಿತ್ತು.

ಜೋಗಿ ರಿಲೀಸ್ ಆದಾಗ ಶಿವಣ್ಣನಿಗೆ 42 ವರ್ಷ: 2005ರಲ್ಲಿ ಪ್ರೇಮ್ ನಿರ್ದೇಶನದ ಜೋಗಿ ರಿಲೀಸ್ ಆದಾಗ ಶಿವಣ್ಣನಿಗೆ 42 ವರ್ಷ. ಇಡೀ ಭಾರತೀಯ ಚಿತ್ರರಂಗ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ ಚಿತ್ರ ಜೋಗಿ. ಚಿತ್ರದಲ್ಲಿನ ಅಮ್ಮ-ಮಗನ ಸೆಂಟಿಮೆಂಟ್, ಹಾಡುಗಳು, ಶಿವಣ್ಣನ ಅಭಿನಯ ಅಭಿಮಾನಿಗಳನ್ನ ಹುಚ್ಚೆಬ್ಬಿಸಿತ್ತು. ಚಿತ್ರದ ಕಥೆ, ಸಂಭಾಷಣೆ ಎಲ್ಲವೂ ಪ್ರೇಕ್ಷಕರನ್ನ ರಂಜಿಸಿತ್ತು. ಕೋಟಿ ಕೋಟಿ ಬಾಚಿದ ಈ ಚಿತ್ರ ಹೊಸ ಮೈಲಿಗಲ್ಲು ಸ್ಥಾಪಿಸಿತು. 

ರಾಜಕುಮಾರ ಪುನೀತ್`ಗೆ 42 ವರ್ಷ: ಈಗ 2017ರಲ್ಲಿ ರಾಜಕುಮಾರ ರಿಲೀಸ್ ಆಗಿದ್ದು, ಪುನೀತ್ ರಾಜ್ ಕುಮಾರ್`ಗೆ 42 ವರ್ಷ. ಈಗಾಗಲೇ ಸಿನಿಮಾ ಹೊಸ ದಾಖಲೆಯತ್ತ ಮುನ್ನುಗ್ಗುತ್ತಿದೆ. ಬಿಡುಗಡೆಯಾದ ಎಲ್ಲ ಚಿತ್ರಮಂದಿರಗಳಲ್ಲೂ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳೂ ಅಪ್ಪು ಅಭಿನಯಕ್ಕೆ ಫಿದಾ ಆಗಿದ್ದಾರೆ. ಆನ್`ಲೈನ್ ಸಮೀಕ್ಷೆ, ವಿಮರ್ಶೆಗಳಲ್ಲೂ ರಾಜಕುಮಾರನಿಗೆ ಫುಲ್ ಮಾರ್ಕ್ಸ್ ಸಿಕ್ಕಿದೆ. ಈ ಚಿತ್ರ ಪುನೀತ್ ವೃತ್ತಿ ಜೀವನದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವತ್ತ ಮುನ್ನುಗ್ಗುತ್ತಿದೆ. ವೃದ್ಧ ತಂದೆ-ತಾಯಿಗಳನ್ನ ವೃದ್ಧಾಶ್ರಮಕ್ಕೆ ನೂಕುತ್ತಿರುವ ಅದೆಷ್ಟೋ ಜನ ಈ ಚಿತ್ರ ನೋಡಿ ಬುದ್ಧಿ ಕಲಿತಿದ್ದಾರೆ. ಸಾಮಾಜಿಕ ಸಂದೇಶ ಸಾರುವ ಈ ಮೂರೂ ಚಿತ್ರಗಳು ರಿಲೀಸ್ ಆದಾಗ ರಾಜ್ ಕುಮಾರ್, ಶಿವಣ್ಣ ಮತ್ತು ಪುನೀತ್`ಗೆ 42 ವರ್ಷ ವಯಸ್ಸು.

ಈ ಅಂಕಿ ಅಂಶ ಗಮನಿಸಿದರೆ ಅಣ್ಣಾವ್ರು, ಶಿವಣ್ಣ, ಪುನೀತ್ ಮೂವರಿಗೂ 42ನೇ ವಯಸ್ಸು ಲಕ್ಕಿ ಎನ್ನಬಹುದು. 

ವೆಬ್ದುನಿಯಾವನ್ನು ಓದಿ