ಸುನೀಲ್ ಆಚಾರ್ಯ ನಿರ್ದೇಶನದ ಈ ಚಿತ್ರ ಆರಂಭ ಕಾಲದಿಂದಲೂ ಸಾಗಿ ಬಂದಿರೋದೇ ರೋಚಕ ಹಾದಿಯಲ್ಲಿ. ಅಂಥಾದ್ದೇ ಕಥೆಯೊಂದು ಈ ಸಿನಿಮಾದಲ್ಲಿದೆ ಎಂಬಂಥಾ ಸ್ಪಷ್ಟ ಚಿತ್ರಣ ಈಗಾಗಲೇ ಚಿತ್ರತಂಡಕ್ಕೆ ಸಿಕ್ಕಿ ಹೋಗಿದೆ. ಈವರೆಗೆ ಟೀಸರ್ ಮತ್ತು ಟ್ರೇಲರ್ಗಳಲ್ಲಿ ಅದೆಂಥಾ ಕುತೂಹಲಕ್ಕೆ ಕಾರಣವಾಗಿದ್ದರೂ ಕೂಡಾ ಕಥೆಯ ಬಗ್ಗೆ ಸಣ್ಣ ವಿಚಾರವನ್ನೂ ಬಿಟ್ಟುಕೊಡದಂತೆ ರಾಂದವ ತಂಡ ಸಾಗಿ ಬಂದಿತ್ತು. ಇದೀಗ ಬಿಡುಗಡೆಯಾಗಿರೋ ಟ್ರೇಲರ್ನಲ್ಲಿ ಕಥೆಯ ಸ್ಪಷ್ಟ ಸುಳಿವಿದೆ!
ಗೂಬೆಯೊಂದರ ಬೆಂಬಿದ್ದು ಹೊರಡೋ ರಾಬರ್ಟ್, ಅಲ್ಲೆದುರಾಗೋ ಒಡೆಯನ ಸಮುದ್ರ ಸಂಸ್ಥಾನ ಮತ್ತು ರಾಬರ್ಟ್ನನ್ನು ಕಾಡೋ ಜನ್ಮಾಂತರದ ಪ್ರಶ್ನೆಗಳು... ಇದಕ್ಕೆ ಜೊತೆಯಾಗೋ ಅಘೋರಿಯಂಥಾ ಪಾತ್ರ ಮತ್ತು ನಾನಾ ನಿಗೂಢಗಳೊಂದಿಗೆ ಈ ಟ್ರೇಲರ್ ಮತ್ತಷ್ಟು ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಇದರ ಮೂಲಕವೇ ನಿರ್ದೇಶಕ ಸುನೀಲ್ ಆಚಾರ್ಯ ಎಂಥಾ ಮಜವಾದ ಕಥೆಯನ್ನು ಕೈಗೆತ್ತಿಕೊಂಡಿದ್ದಾರೆಂಬ ಅಂಶದೊಂದಿಗೇ ಭುವನ್ ಪೊನ್ನಣ್ಣರ ನಟನೆಯ ಚಹರೆಗಳು ಕೂಡಾ ಅನಾವರಣಗೊಂಡಿವೆ. ಟ್ರೇಲರ್ ಮೂಲಕವೇ ಪ್ರೇಕ್ಷಕರೆಲ್ಲ ಈ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತು ಕಾಯುವಂತಾಗಿದೆ.
ಇದು ಜನ್ಮಾಂತರದ ಕಥೆ ಹೊಂದಿರೋ ಚಿತ್ರವಾ ಎಂಬಂಥಾ ಪ್ರಶ್ನೆಯನ್ನೂ ಈ ಟ್ರೇಲರ್ ಹುಟ್ಟು ಹಾಕಿದೆ. ಭುವನ್ ಪೊನ್ನಣ್ಣ ಈ ಚಿತ್ರದಲ್ಲಿ ಮೂರು ಶೇಡುಗಳ ಪಾತ್ರವನ್ನು ನಿಭಾಯಿಸಿದ್ದಾರೆ. ಅದರಲ್ಲಿ ಈವರೆಗೆ ಜಾಹೀರಾಗಿರೋದು ಎರಡು ಪಾತ್ರ ಮಾತ್ರವೇ. ಮೂಲನೇ ಪಾತ್ರದ ಬಗ್ಗೆ ಕಂಡೂ ಕಾಣದಂತೆ ಸುಳಿವು ಕೊಡುತ್ತಲೇ ಇತರೇ ಒಂದಷ್ಟು ಪಾತ್ರಗಳ ಝಲಕ್ಕುಗಳು ಕೂಡಾ ಈ ಟ್ರೇಲರ್ ಮೂಲಕ ಅನಾವರಣಗೊಡಿವೆ. ಅಂತೂ ಇದು ಮಾಮೂಲಿಯಾದ ಕಥೆಯ ಚಿತ್ರ ಅನ್ನೋದು ಖರೇ. ಇದರ ಒಟ್ಟಾರೆ ವಿಶೇಷತೆಗಳನ್ನು ಕಣ್ತುಂಬಿಕೊಳ್ಳಲು ಇನ್ನು ಕೆಲ ದಿನಗಳಷ್ಟೇ ಬಾಕಿ ಉಳಿದಿವೆ.