ಮಳೆ ಕೊಂಚ ಹತೋಟಿಗೆ ಬಂದಿದ್ದರೂ ಕೂಡಾ ಉತ್ತರ ಕರ್ನಾಟಕದ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ. ಭೋರ್ಗರೆಯುತ್ತಿರೋ ಕೃಷ್ಣೆಯ ಕೋಪ ತಾಪವೂ ಹಾಗೆಯೇ ಮುಂದುವರೆಯುತ್ತಿದೆ. ಇದಕ್ಕೆ ಸಿಕ್ಕು ನಲುಗಿರೋ ಜನರ ನೆರವಿಗೀಗ ರಾಂಧವ ಚಿತ್ರತಂಡ ಧಾವಿಸಿದೆ. ಬೇರೆಯದ್ದೇ ರೀತಿಯ ಸಂಪೂರ್ಣ ತಯಾರಿಗೊಂದಿಗೆ ಈ ತಂಡವೀಗ ಗೋಕಾಕ್ಗೆ ಬಂದಿಳಿದಿದೆ. ಈ ತಂಡ ಇದಕ್ಕಾಗಿ ಮಾಡಿಕೊಂಡಿರೋ ಪೂರ್ವತಯಾರಿ ಮತ್ತು ಸಹಾಯಹಸ್ತದ ರೂಪುರೇಷೆಗಳೆಲ್ಲವೂ ಈ ಕ್ಷಣಕ್ಕೆ ಆ ಪ್ರದೇಶಗಳ ಅಗತ್ಯಕ್ಕೆ ಪೂರಕವಾಗಿದೆ.
ಸುನೀಲ್ ಆಚಾರ್ಯ ನಿರ್ದೇಶನದ, ಭುವನ್ ನಾಯಕನಾಗಿರೋ ರಾಂಧವ ಚಿತ್ರದ ಒಂದಿಡೀ ತಂಡ ಉತ್ತರ ಕರ್ನಾಟಕದ ಜನರಿಗೆ ಸಹಾಯ ಮಾಡಲು ಸನ್ನದ್ಧವಾಗಿದೆ. ಉತ್ತರಕರ್ನಾಟಕದ ಕೆಲ ಪ್ರದೇಶಗಳತ್ತ ಈಗ ಗಮನ ನೆಡಲಾಗುತ್ತಿದ್ದರೂ ಎಲ್ಲ ಪ್ರದೇಶಗಳನ್ನೂ ತಲುಪಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಅಂಥಾ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ರಾಂಧವ ತಂಡ ಕಾರ್ಯಾಚರಣೆಗಿಳಿದಿದೆ.
ಆರಂಭದಲ್ಲಿ ಗೋಕಾಕ್ಗೆ ಬಂದಿಳಿದಿರೋ ರಾಂಧವ ತಂಡ ನಂತರ ಚಿಕ್ಕೋಡಿ, ನಿಪ್ಪಾಣಿ ಮುಂತಾದೆಡೆಗಳಲ್ಲಿಯೂ ಕಾರ್ಯಾಚರಣೆ ನಡೆಸಲಿದೆ. ಅಲ್ಲಿನ ಸಂತ್ರಸ್ತರೊಂದಿಗೆ ಮಾತನಾಡಿ ಅಲ್ಲಿ ನಿಜಕ್ಕೂ ಯಾವ್ಯಾವ ವಸ್ತುಗಳ ಅಗತ್ಯವಿದೆ ಎಂಬುದನ್ನು ಮನಗಂಡು ಆ ಬಗ್ಗೆ ಬೆಂಗಳೂರಿನಲ್ಲಿರೋ ತಮ್ಮ ತಂಡಕ್ಕೆ ಮಾಹಿತಿ ನೀಡಲಿದೆ. ಶೀಘ್ರದಲ್ಲಿಯೇ ಅಂಥಾ ಅಗತ್ಯ ವಸ್ತುಗಳನ್ನು ತರಿಸಿಕೊಂಡು ಎಲ್ಲ ಜನರಿಗೂ ಹಂಚುವಂಥಾ ಕಾರ್ಯ ಯೋಜನೆಯೊಂದಿಗೆ ರಾಂಧವ ತಂಡ ಪ್ರವಾಹಪೀಡಿತ ಸ್ಥಳಗಳಲ್ಲಿ ಕಾರ್ಯಾಚರಣೆಗಿಳಿದಿದೆ.