ಬೆಂಗಳೂರು: ಕೆಜಿಎಫ್ ಸಿನಿಮಾ ಬಳಿಕ ಕನ್ನಡದಲ್ಲಿ ಸ್ಟಾರ್ ನಟರು ಆಕ್ಷನ್ ಸಿನಿಮಾಗಳ ಹಿಂದೆ ಬಿದ್ದಿದ್ದಾರೆ. ಇದರಿಂದಾಗಿಯೇ ಚಿತ್ರ ನಿರ್ಮಾಣಕ್ಕೆ ಸಮಯ ಹಿಡಿಯುತ್ತಿದೆ.
ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾಗದೇ ಚಿತ್ರಮಂದಿರಗಳು ನಷ್ಟದಲ್ಲಿವೆ. ವರ್ಷಕ್ಕೆ ಎರಡು ಸಿನಿಮಾ ಕೊಡುತ್ತಿದ್ದ ಸ್ಟಾರ್ ನಟರು ಈಗ ಒಂದು ಸಿನಿಮಾ ಕೊಟ್ಟರೆ ಹೆಚ್ಚು. ಇದಕ್ಕೆ ಕಾರಣ, ಸ್ಟಾರ್ ನಟರು ಪ್ಯಾನ್ ಇಂಡಿಯಾ ಲೆವೆಲ್ ನ ಥ್ರಿಲ್ಲರ್ ಸಿನಿಮಾಗಳನ್ನೇ ಒಪ್ಪಿಕೊಳ್ಳುತ್ತಿದ್ದು, ಇಂತಹ ಸಿನಿಮಾ ನಿರ್ಮಾಣಕ್ಕೆ ಸಮಯ ಹೆಚ್ಚು ಹಿಡಿಯುತ್ತಿದೆ.
ಉದಾಹರಣೆಗೆ ಶಿವರಾಜ್ ಕುಮಾರ್ ಹುಟ್ಟುಹಬ್ಬದಂದು ಅವರ ಮುಂಬರುವ ಸುಮಾರು 10 ಸಿನಿಮಾಗಳ ಪೋಸ್ಟರ್ ಬಿಡುಗಡೆಯಾಗಿತ್ತು. ವಿಶೇಷವೆಂದರೆ ಇವೆಲ್ಲವೂ ಮಾಸ್ ಸಿನಿಮಾಗಳೇ. ಕಿಚ್ಚ ಸುದೀಪ್ ಇತ್ತೀಚೆಗೆ ಹೊಸ ಸಿನಿಮಾ ಘೋಷಣೆ ಮಾಡಿದ್ದು ಅದೂ ಭರ್ಜರಿ ಆಕ್ಷನ್ ಸಿನಿಮಾ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ಮುಂದಿನ ಚಿತ್ರಗಳು ಮಾರ್ಟಿನ್, ಕೆಡಿ ಎರಡೂ ಪಕ್ಕಾ ಆಕ್ಷನ್ ಸಿನಿಮಾಗಳು.ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಇನ್ನೂ ಘೋಷಣೆಯಾಗದೇ ಇದ್ದರೂ ಅವರದ್ದೂ ಆಕ್ಷನ್ ಥ್ರಿಲ್ಲರ್ ಎನ್ನುವುದು ಪಕ್ಕಾ ಆಗಿದೆ. ಇಂತಹ ಸಿನಿಮಾ ನಿರ್ಮಾಣಕ್ಕೆ ಸಾಕಷ್ಟು ಸಮಯ ಹಿಡಿಯಿತ್ತಿದ್ದು, ಇದರಿಂದಾಗಿಯೇ ಸ್ಟಾರ್ ಸಿನಿಮಾಗಳಿಲ್ಲದೇ ಚಿತ್ರಮಂದಿರಗಳು ಸೊರಗುತ್ತಿವೆ.